ಕಾಬೂಲ್ : ಪೂರ್ವ ಅಫ್ಘಾನಿಸ್ತಾನದಲ್ಲಿ ಸಂಭವಿಸಿದ 6.3 ತೀವ್ರತೆಯ ಭೂಕಂಪಕ್ಕೆ ಇದುವರೆಗೆ ಸುಮಾರು 800 ಮಂದಿ ಸಾವನ್ನಪ್ಪಿದ್ದಾರೆ. ಈ ಅವಘಡಕ್ಕೆ ವಿಷಾದ ವ್ಯಕ್ತಪಡಿಸಿರುವ ಭಾರತ ಅಫ್ಘಾನಿಸ್ತಾನದ ನೆರವಿಗೆ ನಿಂತಿದ್ದು, 15 ಟನ್ ಆಹಾರ ಸಾಮಾಗ್ರಿಗಳನ್ನು ರವಾನೆ ಮಾಡಿದೆ.
ಭೂಕಂಪದಿಂದಾಗಿ ಮನೆಗಳು ನೆಲಸಮವಾಗಿದ್ದು, ಅವಶೇಷಗಳ ಕೆಳಗೆ ಹೂತುಹೋಗಿರುವವರನ್ನು ರಕ್ಷಿಸಲು ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆ ಮುಂದುವರಿಸಿದ್ದಾರೆ. ಭೂಕಂಪದ ತೀವ್ರತೆಗೆ ಸುಮಾರು 2,500 ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ.
ಅಫ್ಘಾನಿಸ್ತಾನದಲ್ಲಿ ಭೂಕಂಪ ಸಂಭವಿಸುತ್ತಿದ್ದಂತೆ, ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಅಫ್ಘಾನ್ ವಿದೇಶಾಂಗ ಸಚಿವ ಮೌಲವಿ ಅಮೀರ್ ಖಾನ್ ಮುತ್ತಕಿ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಇನ್ನು ಘಟನೆಯಲ್ಲಿ ಸಾವನ್ನಪ್ಪಿದ ನಾಗರಿಕರಿಗೆ ಸಂತಾಪ ಸೂಚಿಸಿದ್ದಾರೆ.
“ಅಫ್ಘಾನಿಸ್ತಾನದ ಸಂಕಷ್ಟದ ಸಮಯದಲ್ಲಿ ಅವರಿಗೆ ಸಹಾಯ ಮಾಡಲು, ಭಾರತವು ಡೇರೆಗಳು ಮತ್ತು ಆಹಾರ ಸಾಮಗ್ರಿಗಳನ್ನು ದೇಶಕ್ಕೆ ರವಾನಿಸಿದೆ. ಮುಂದಿನ ದಿನಗಳಲ್ಲಿ ಅಫ್ಘಾನಿಸ್ತಾನಕ್ಕೆ ಹೆಚ್ಚಿನ ನೆರವು ನೀಡಲಾಗುವುದು. ಭಾರತ ಇಂದು ಕಾಬೂಲ್ನಲ್ಲಿ 1000 ಕುಟುಂಬ ಡೇರೆಗಳನ್ನು ತಲುಪಿಸಿದೆ. ಭಾರತೀಯ ಮಿಷನ್ 15 ಟನ್ ಆಹಾರ ಸಾಮಗ್ರಿಗಳನ್ನು ತಕ್ಷಣವೇ ಕಾಬೂಲ್ನಿಂದ ಕುನಾರ್ಗೆ ಸಾಗಿಸುತ್ತಿದೆ” ಎಂದು ಜೈಶಂಕರ್ ತಿಳಿಸಿದ್ದಾರೆ.
ಅಫ್ಘಾನಿಸ್ತಾನದಲ್ಲಿ 6.3 ತೀವ್ರತೆಯ ಭೂಕಂಪ ಸಂಭವಿಸಿದ್ದು, ಪಾಕಿಸ್ತಾನದ ಗಡಿಯಲ್ಲಿರುವ ಕುನಾರ್ ಪ್ರಾಂತ್ಯದಲ್ಲಿ ಮಾತ್ರ ಸುಮಾರು 800 ಮಂದಿ ಮೃತಪಟ್ಟಿದ್ದಾರೆ. ನೂರಾರು ಜನರು ಹತ್ತಿರದ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ.
ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ (ಯುಎಸ್ಜಿಎಸ್) ವರದಿ ಪ್ರಕಾರ, ಸ್ಥಳೀಯ ಸಮಯ ರಾತ್ರಿ 11:47 ಕ್ಕೆ 8 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದೆ. ಭೂಕಂಪದ ಕೇಂದ್ರಬಿಂದು ನಂಗರ್ಹಾರ್ ಪ್ರಾಂತ್ಯದ ಜಲಾಲಾಬಾದ್ನಿಂದ ಪೂರ್ವ-ಈಶಾನ್ಯಕ್ಕೆ 27 ಕಿ.ಮೀ ದೂರದಲ್ಲಿದೆ.
ಕುನಾರ್ ಪ್ರಾಂತ್ಯದಲ್ಲಿ ನೂರ್ ಗುಲ್, ಸೋಕಿ, ವಾಟ್ಪುರ್, ಮನೋಗಿ ಮತ್ತು ಚಾಪಾ ದಾರಾ ಪ್ರದೇಶಗಳು ಅತಿ ಹೆಚ್ಚು ಹಾನಿಗೊಳಗಾಗಿವೆ. ದುರ್ಬಲವಾದ ಮಣ್ಣು ಮತ್ತು ಕಲ್ಲಿನಿಂದ ನಿರ್ಮಿಸಲಾದ ಇಡೀ ಹಳ್ಳಿಗಳು ಭೂಕಂಪದಿಂದಾಗಿ ಕುಸಿದಿವೆ. ಭೂಕುಸಿತಗಳು ಪ್ರಮುಖ ಮಾರ್ಗಗಳನ್ನು ಮುಚ್ಚಿಹಾಕಿವೆ. ಇದರಿಂದಾಗಿ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯುಂಟಾಗಿದೆ.