ಮುಂಬೈ: ಮಹಾರಾಷ್ಟ್ರದ ಸಿಎಂ ಆಗಿ ದೇವೇಂದ್ರ ಫಡ್ನವಿಸ್ ಅಧಿಕಾರ ಸ್ವೀಕರಿಸಿದ್ದಾರೆ. ಇದರ ಬೆನ್ನಲ್ಲೇ ಖಾತೆ ಹಂಚಿಕೆ ವಿಷಯ ಈಗ ಮುನ್ನೆಲೆಗೆ ಬಂದಿದೆ. ತಮಗೆ ಗೃಹ ಖಾತೆ ಬೇಕು ಎಂದು ಮಾಜಿ ಸಿಎಂ ಏಕನಾಥ್ ಶಿಂಧೆ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ. ರಾಜ್ಯ ವಿಧಾನಸಭೆಯ ಚಳಿಗಾಲದ ಅಧಿವೇಶನಕ್ಕೆ ಮುನ್ನ ಡಿಸೆಂಬರ್ 11 ಮತ್ತು 16 ರ ನಡುವೆ ಸಂಪುಟ ವಿಸ್ತರಣೆಯಾಗುವ ಸಾಧ್ಯತೆಯಿದೆ ಎಂದು ಶಿವಸೇನೆಯ ಮುಖ್ಯಸ್ಥರಾದ ಶಿಂಧೆ ಅವರ ಆಪ್ತರಾಗಿರುವ ಗೋಗಾವಲೆ ಹೇಳಿದ್ದಾರೆ. ಡಿಸೆಂಬರ್ 16 ರಿಂದ ರಾಜ್ಯದ ಎರಡನೇ ರಾಜಧಾನಿ ನಾಗ್ಪುರದಲ್ಲಿ ವಿಧಾನಮಂಡಲದ ಚಳಿಗಾಲದ ಅಧಿವೇಶನ ಆರಂಭವಾಗಲಿದೆ. ಈ ಹಿಂದೆ ಶಿಂಧೆ ನೇತೃತ್ವದ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿದ್ದ ದೇವೇಂದ್ರ ಫಡ್ನವಿಸ್ ಗೃಹ ಖಾತೆಯನ್ನು ನಿರ್ವಹಿಸಿದ್ದರು. ಏಕನಾಥ್ ಶಿಂಧೆ ಗೃಹ ಇಲಾಖೆಗೆ ಬೇಡಿಕೆ ಇಟ್ಟಿದ್ದಾರೆ. ಖಾತೆ ಹಂಚಿಕೆ ಕುರಿತ ಮಾತುಕತೆ ಪ್ರಗತಿಯಲ್ಲಿದೆ ಎಂದು ಗೋಗಾವಲೆ ತಿಳಿಸಿದ್ದಾರೆ.
