ಏಕನಾಥೇಶ್ವರಿ ಅಮ್ಮನವರ ಸಿಡಿ ಮಹೋತ್ಸವ.!

 

ಚಿತ್ರದುರ್ಗ : ಕೋಟೆ ರಸ್ತೆಯಲ್ಲಿರುವ ಪಾದಗುಡಿಯಲ್ಲಿ ದುರ್ಗದ ಅದಿ ದೇವತೆ ಏಕನಾಥೇಶ್ವರಿ ಅಮ್ಮನ ಸಿಡಿ ಮಹೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಶನಿವಾರ ವಿಜೃಂಭಣೆಯಿಂದ ನಡೆಯಿತು.

ಪಾದಗುಡಿಯ ತುಂಬೆಲ್ಲಾ ಭಕ್ತರು ಜಮಾಯಿಸಿ ಉದೋ ಉದೋ ಎನ್ನುತ್ತಿದ್ದರು. ಸಿಡಿ ಕಂಬವನ್ನು ಬಣ್ಣ ಬಣ್ಣದ ವಸ್ತ್ರಗಳಿಂದ ಅಲಂಕರಿಸಲಾಗಿತ್ತು. ಸಿಡಿ ಕಟ್ಟುವ ಕಂಬದ ಒಂದು ತುದಿಯಲ್ಲಿ ಕೆಂಪು ಬಣ್ಣದ ಬಟ್ಟೆಯಿಂದ ಕಮಾನು ನಿರ್ಮಿಸಿ ಬಲೂನು ಹಾಗೂ ಬೇವಿನ ಸೊಪ್ಪಿನಿಂದ ಸಿಂಗರಿಸಲಾಗಿತ್ತು. ಸಿಡಿ ಆಡುವವರು ಬಿಳಿ ಪಂಚೆ, ತಲೆಗೆ ಪೇಟ, ಮೈಗೆ ಗಂಧ ಅರಿಶಿಣವನ್ನು ಪೂಸಿಕೊಂಡು ಕೈಯಲ್ಲಿ ಕತ್ತಿ ಹಿಡಿದಿದ್ದರು. ಹರಕೆ ಹೊತ್ತವರು ಸಿಡಿ ಕಂಬದಲ್ಲಿ ಮೂರು ಸುತ್ತು ತಿರುಗುತ್ತಿದ್ದಾಗ ನೆರೆದಿದ್ದ ಸಹಸ್ರಾರು ಭಕ್ತರು ಭಕ್ತಿ ಸಮರ್ಪಿಸುತ್ತಿದ್ದರು.

Advertisement

ನಗರ ಸೇರಿದಂತೆ ಗ್ರಾಮೀಣ ಭಾಗಗಳಿಂದಲೂ ಅಪಾರ ಭಕ್ತರು ಜಮಾಯಿಸಿ ಸಿಡಿ ವೀಕ್ಷಿಸಿದರು. ದೇವಸ್ಥಾನ ಹಾಗೂ ಆವರಣ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿತ್ತು.

ಕೆಲವು ಮಹಿಳೆಯರು ಪುಟ್ಟ ಮಕ್ಕಳನ್ನು ಹೊತ್ತು ಸಿಡಿ ನೋಡಿ ಸಂಭ್ರಮಿಸಿದರು. ಆನೆ ಬಾಗಿಲು, ಕೋಟೆ ರಸ್ತೆ, ಫಿಲ್ಟರ್ಹೌಸ್, ಕರುವಿನಕಟ್ಟೆ ರಸ್ತೆ, ಕಾಮನಬಾವಿ ಬಡಾವಣೆ ರಸ್ತೆ ಭಕ್ತರಿಂದ ತುಂಬಿ ತುಳುಕಾಡುತ್ತಿತ್ತು. ಮಹಿಳೆಯರು ಆರತಿ ತಟ್ಟೆಗಳನ್ನು ಹಿಡಿದು ಸಿಡಿ ಆಡುವವರನ್ನು ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ಕರೆ ತರುತ್ತಿದ್ದರು. ಕೆಲವರು ತಮ್ಮ ಚಿಕ್ಕ ಚಿಕ್ಕ ಮಕ್ಕಳನ್ನು ಸಿಡಿ ಕಂಬದ ಮೇಲೆ ಕೂರಿಸಿ ಖುಷಿ ಪಡುತ್ತಿದ್ದರು.

ಏಕನಾಥೇಶ್ವರಿ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಜಮೀನ್ದಾರ್ ದೊರೆಸ್ವಾಮಿ, ನಿರ್ದೇಶಕ ರಾಮಜ್ಜ, ಎಸ್.ಬಿ.ಎಲ್.ಮಲ್ಲಿಕಾರ್ಜುನ್, ನಗರಸಭೆ ಮಾಜಿ ಸದಸ್ಯ ರಾಜೇಶ್, ಓಂಕಾರ್ ಸೇರಿದಂತೆ ಉತ್ಸವ ಸಮಿತಿಯ ಪದಾಧಿಕಾರಿಗಳು ಸಿಡಿಯಲ್ಲಿ ಪಾಲ್ಗೊಂಡು ಏಕನಾಥೇಶ್ವರಿಗೆ ಭಕ್ತಿ ಅರ್ಪಿಸಿದರು. ಜನಜಂಗುಳಿಯಿದ್ದುದರಿಂದ ಕೆಲವರು ಮನೆ ಹಾಗೂ ಕಾಂಪೌಂಡ್ಗಳ ಮೇಲೆ ಏರಿ ಸಿಡಿ ವೀಕ್ಷಿಸುತ್ತಿದ್ದರು.

 

 

Add a comment

Leave a Reply

Your email address will not be published. Required fields are marked *

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement