ಎನ್‌ಕೌಂಟರ್ ಮೂಲಕವೇ ಮುಂಬೈ ಭೂಗತ ಲೋಕದಲ್ಲಿ ಸದ್ದು ಮಾಡಿದ್ದ ಕನ್ನಡಿಗ ದಯಾನಾಯಕ್ ನಿವೃತ್ತಿಯಾಗುತ್ತಿದ್ದಾರೆ. ಎರಡು ದಿನಗಳ ಹಿಂದೆ ಮಹಾರಾಷ್ಟ್ರ ಸರ್ಕಾರ ಅವರಿಗೆ ಮುಂಬೈನ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿ ಬಡ್ತಿ ನೀಡಿತ್ತು.
1995ರಲ್ಲಿ ಮುಂಬೈ ಪೊಲೀಸ್ ಪಡೆಗೆ ಸೇರಿದ್ದ ದಯಾನಾಯಕ್ ಎನ್‌ಕೌಂಟರ್ ಮೂಲಕವೇ ಸುದ್ದಿಯಾಗಿದ್ದರು. ಹಲವು ಭೂಗತ ಪಾತಕಿಗಳನ್ನು ಹೊಡೆದು ಹಾಕಿ ಎನ್‌ಕೌಂಟರ್ ಸ್ಪೆಷಲಿಸ್ಟ್ ಎಂದೇ ಖ್ಯಾತಿಗಳಿಸಿದ್ದಾರೆ.
ದಯಾನಾಯಕ್ ಬಾಂದ್ರಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಜುಲೈ 29ರಂದು ಮಹಾರಾಷ್ಟ್ರ ಸರ್ಕಾರ ಅವರಿಗೆ ಬಡ್ತಿಯನ್ನು ನೀಡಿ ಅಸಿಸ್ಟೆಂಟ್ ಕಮೀಷನರ್ ಆಫ್ ಪೊಲೀಸ್ ದರ್ಜೆಯನ್ನು ನೀಡಿತ್ತು. ಜುಲೈ 31ರಂದು ಅವರು ನಿವೃತ್ತರಾಗುತ್ತಿದ್ದಾರೆ.
ಎಸಿಪಿಯಾಗಿ ಬಡ್ತಿ ಪಡೆದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಾಕಿ ಪೋಸ್ಟ್ ಒಂದನ್ನು ದಯಾನಾಯಕ್ ಹಾಕಿದ್ದರು.
‘ಮೊದಲ ಬಾರಿಗೆ ಎಸಿಪಿ ಸಮವಸ್ತ್ರ ಧರಿಸುತ್ತಿದ್ದೇನೆ, ಶಾಶ್ವತವಾಗಿ ಅದನ್ನು ನೇತುಹಾಕುವ ಒಂದು ದಿನ ಮೊದಲು. ಜೀವಮಾನದ ಸೇವೆಯ ನಂತರ, ಈ ಕ್ಷಣವು ಹೆಮ್ಮೆಯನ್ನು ತಂದಿದೆ. ಇದು ಕೊನೆಯಲ್ಲಿ ಬಂದಿರಬಹುದು, ಆದರೆ ಇದು ಪೂರ್ಣ ವೃತ್ತಿಯ ಆಶೀರ್ವಾದದಂತೆ ಭಾಸವಾಗುತ್ತದೆ. ಇದು ಬಡ್ತಿ ಮಾತ್ರವಲ್ಲದೇ, ಜೀವಿತಾವಧಿಯ ಕರ್ತವ್ಯ, ಶಿಸ್ತು ಮತ್ತು ಸಮರ್ಪಣೆಯನ್ನು ಗುರುತಿಸುವ ಗೌರವ’ ಎಂದು ಹೇಳಿದ್ದರು.
‘ಪ್ರಯಾಣದ ಪ್ರತಿಯೊಂದು ಹೆಜ್ಜೆಗೂ ಮತ್ತು ನನ್ನ ರಾಜ್ಯ ಮತ್ತು ದೇಶಕ್ಕೆ ಸೇವೆ ಸಲ್ಲಿಸುವ ಸವಲತ್ತಿಗೆ ಕೃತಜ್ಞನಾಗಿದ್ದೇನೆ. ಜೈ ಹಿಂದ್, ಜೈ ಮಹಾರಾಷ್ಟ್ರ’ ಎಂದು ಪೋಸ್ಟ್‌ನಲ್ಲಿ ಬರೆದಿದ್ದರು.
90ರ ದಶಕದಲ್ಲಿ ಮುಂಬೈನಲ್ಲಿ ಸದ್ದು ಮಾಡಿದ ಪೊಲೀಸ್ ಅಧಿಕಾರಿಗಳಲ್ಲಿ ದಯಾನಾಯಕ್ ಸಹ ಒಬ್ಬರು. ಎನ್‌ಕೌಂಟರ್ ಮೂಲಕವೇ ಹಲವು ಭೂಗತ ಪಾತಕಿಗಳನ್ನು ಮಟ್ಟ ಹಾಕಿದ್ದ ಅವರ ಕುರಿತು ಸಿನಿಮಾ ಸಹ ನಿರ್ಮಾಣಗೊಂಡಿವೆ.
2006ರಲ್ಲಿ ದಯಾನಾಯಕ್ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳ ಅಕ್ರಮ ಆಸ್ತಿಗಳಿಕೆ ಪ್ರಕರಣವನ್ನು ದಾಖಲು ಮಾಡಿಕೊಂಡಿತ್ತು. ಆದರೆ ವಿಚಾರಣೆ ಬಳಿಕ ಈ ಕೇಸ್‌ನಲ್ಲಿ ಅವರಿಗೆ ಕ್ಲೀನ್ ಚಿಟ್ ನೀಡಲಾಗಿತ್ತು.
ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳದಲ್ಲಿಯೂ ದಯಾನಾಯಕ್ ಕೆಲಸ ಮಾಡಿದ್ದಾರೆ. ಅಂಬಾನಿ ನಿವಾಸದ ಭದ್ರತಾ ಲೋಪ ಪ್ರಕರಣದ ತನಿಖೆ, ನಟ ಸೈಫ್ ಅಲಿಖಾನ್ ಮೇಲಿನ ದಾಳಿಯ ತನಿಖಾ ತಂಡದಲ್ಲಿಯೂ ಕನ್ನಡಿಗ ದಯಾನಾಯಕ್ ಇದ್ದರು.
ಮುಂಬೈ ಪೊಲೀಸ್ ಪಡೆಯಲ್ಲಿ ಹೆಸರು ಮಾಡಿರುವ ದಯಾನಾಯಕ್ ಕನ್ನಡಿಗರು. ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಎಣ್ಣೆಹೊಳೆಯವರು. ಮುಂಬೈ ಪೊಲೀಸ್‌ನ 9 ವಿಭಾಗದಲ್ಲಿ ಕೆಲಸ ಮಾಡಿದ್ದಾರೆ.
ಕುಟುಂಬಕ್ಕೆ ಸಹಾಯ ಮಾಡಲು 1979ರಲ್ಲಿ ದಯಾನಾಯಕ್ ಮುಂಬೈಗೆ ತೆರಳಿದರು. ಹೋಟೆಲ್‌ಗಳಲ್ಲಿಯೂ ಕೆಲಸ ಮಾಡಿದರು. ಕೆಲಸದ ನಡುವೆಯೇ ಓದನ್ನು ಪೂರ್ಣಗೊಳಿಸಿ, ಪದವಿ ಪಡೆದರು.
ಮಹಾರಾಷ್ಟ್ರ ಪೊಲೀಸ್ ಅಕಾಡಮಿ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡ ಅವರು 1995ರಲ್ಲಿ ಸಬ್ ಇನ್ಸ್‌ಪೆಕ್ಟರ್ ಆಗಿ ಕೆಲಸ ಪ್ರಾರಂಭಿಸಿದರು. ದಾವುದ್ ಇಬ್ರಾಹಿಂ, ಚೋಟಾ ರಾಜನ್, ಅಮರ್ ನಾಯಕ್ ಸಿಂಡಿಕೇಟ್‌ನ ಹಲವು ಭೂಗತ ಪಾತಕಿಗಳನ್ನು ದಯಾನಾಯಕ್ ಎನ್‌ಕೌಂಟರ್ ಮಾಡಿದ್ದಾರೆ.
‘ಡಿಪಾರ್ಟ್‌ಮೆಂಟ್’ ಸೇರಿದಂತೆ ದಯಾನಾಯಕ್ ಕುರಿತು ಹಲವು ಚಿತ್ರಗಳನ್ನು ನಿರ್ಮಾಣ ಮಾಡಲಾಗಿದೆ. ತಮ್ಮ ಸ್ವಂತ ಊರಿನಲ್ಲಿ ತಾಯಿ ಹೆಸರಿನಲ್ಲಿ ರಾಧಾ ನಾಯಕ್ ಎಜುಕೇಷನ್ ಟ್ರಸ್ಟ್ ಮೂಲಕ ಶಾಲೆಯನ್ನು ಅವರು ನಡೆಸುತ್ತಿದ್ದಾರೆ.