ನವದೆಹಲಿ : ಪ್ರಸಾದದ ವಿಚಾರವಾಗಿ ಆರಂಭವಾದ ಗಲಾಟೆ ಕೊಲೆಯಲ್ಲಿ ಅಂತ್ಯವಾದ ಘಟನೆ ದೆಹಲಿಯ ಕಲ್ಕಾಜಿ ದೇಗುಲದಲ್ಲಿ ನಡೆದಿದೆ. ಘಟನೆಯಲ್ಲಿ 35 ವರ್ಷದ ದೇವಸ್ಥಾನದ ಸೇವಕರೊಬ್ಬರನ್ನು ಗುಂಪೊಂದು ಥಳಿಸಿ ಕೊಲೆ ಮಾಡಿದೆ.
ಮೃತರನ್ನು ಉತ್ತರ ಪ್ರದೇಶದ ಹಾರ್ದೋಯ್ ಮೂಲದ ಯೋಗೇಂದ್ರ ಸಿಂಗ್ (35) ಎಂದು ಗುರುತಿಸಲಾಗಿದೆ. ಅವರು ಕಳೆದ 15 ವರ್ಷಗಳಿಂದ ದೇವಸ್ಥಾನದಲ್ಲಿ ಸೇವೆ ಸಲ್ಲಿಸುತ್ತಿದ್ದರು.
ಪೊಲೀಸರ ಪ್ರಕಾರ, ಆಗಸ್ಟ್ 29ರ ಸಂಜೆ, ಒಂದು ಗುಂಪಿನ ಪುರುಷರು ತಮ್ಮ ದರ್ಶನ ಮುಗಿಸಿದ ನಂತರ ಪ್ರಸಾದಕ್ಕಾಗಿ ದೇವಸ್ಥಾನದ ಸೇವಕನ ಬಳಿ ಬಂದಾಗ ಈ ಘಟನೆ ಸಂಭವಿಸಿದೆ. ಈ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದು ಅದು ಜಗಳವಾಗಿ, ಬಳಿಕ ಹಿಂಸಾಚಾರಕ್ಕೆ ತಿರುಗಿದೆ. ಸಿಸಿಟಿವಿ ದೃಶ್ಯಾವಳಿಯಲ್ಲಿ ಕನಿಷ್ಠ ಮೂವರು ವ್ಯಕ್ತಿಗಳು ದೊಣ್ಣೆ ಮತ್ತು ಕೈಗಳಿಂದ ಯೋಗೇಂದ್ರ ಸಿಂಗ್ ಅವರ ಮೇಲೆ ಪದೇ ಪದೇ ಹಲ್ಲೆ ಮಾಡಿರುವುದು ಕಂಡುಬಂದಿದೆ.
ಘಟನೆಯಲ್ಲಿ ಯೋಗೇಂದ್ರ ಸಿಂಗ್ ಅವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಏಮ್ಸ್ ಟ್ರಾಮಾ ಸೆಂಟರ್‌ಗೆ ದಾಖಲಿಸಲಾಗಿತ್ತು. ಆದರೆ ಅವರು ಚಿಕಿತ್ಸೆಯ ಸಮಯದಲ್ಲಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಜನರು ದಕ್ಷಿಣಪುರಿಯ ನಿವಾಸಿ ಅತುಲ್ ಪಾಂಡೆ (30) ಎಂಬ ಹಲ್ಲೆಕೋರರಲ್ಲಿ ಒಬ್ಬನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಕೊಲೆ ಪ್ರಕರಣ ದಾಖಲಿಸಲಾಗಿದ್ದು, ಇತರ ಆರೋಪಿಗಳನ್ನು ಪತ್ತೆಹಚ್ಚಲು ಶೋಧ ಕಾರ್ಯ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.