ಬೆಂಗಳೂರು : ಸರಕಾರವು ಆ. 16ರಿಂದ ಒಳ ಮೀಸಲಾತಿ ಜಾರಿ ಮಾಡಲು ಪ್ರಯತ್ನ ಮಾಡಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಮತ್ತು ಸಂಸದ ಗೋವಿಂದ ಕಾರಜೋಳ ಆಗ್ರಹಿಸಿದರು.
ಅವರು ಮಾಧ್ಯಮಕ್ಕೆ ಮಾತನಾಡಿ, ಅಸಹಕಾರ ಚಳವಳಿಗೆ ಅವಕಾಶ ಮಾಡಿ ಕೊಡಬಾರದು ಎಂದು ಅವರು ತಿಳಿಸಿದರು. ಕಾಂಗ್ರೆಸ್ ನಾಯಕರು, ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ರಾಷ್ಟ್ರೀಯ ನಾಯಕ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನುಡಿದಂತೆ ನಡೆದಿದ್ದೇವೆ ಎನ್ನುತ್ತಾರೆ. ದಲಿತರಿಗೆ ಮೋಸ ಮಾಡಿಲ್ಲ ಎಂದು ಹೇಳುತ್ತಾರೆ. 2023ರ ಚುನಾವಣೆಯಲ್ಲಿ ಕರ್ನಾಟಕ ವಿಧಾನಸಭೆ ಪ್ರಚಾರದ ವೇಳೆ ಪ್ರಣಾಳಿಕೆಯಲ್ಲಿ ಇದನ್ನು ತಿಳಿಸಿದ್ದರು. ಮೊದಲನೇ ಸಂಪುಟ ಸಭೆಯಲ್ಲಿ ಒಪ್ಪಿಗೆ ಕೊಟ್ಟು ಜಾರಿ ಮಾಡುವುದಾಗಿ ಹೇಳಿದ್ದರು. ಕುಂಟು ನೆಪ ಹೇಳಿ ನಾಗಮೋಹನದಾಸ್ ಸಮಿತಿ ರಚಿಸಿದರು ಎಂದರು.
40 ದಿನಗಳಲ್ಲಿ ವರದಿ ತರಿಸುವುದಾಗಿ ಹೇಳಿದ್ದರು. 6 ತಿಂಗಳಾಗಿದೆ. ಇದು ಸರಕಾರ ಮಾಡುತ್ತಿರುವ ದ್ರೋಹ, ಮೋಸ ಎಂದು ಟೀಕಿಸಿದರು.
ನಾಗಮೋಹನದಾಸ್ ಅವರು ಕೆಲವು ಮಾಹಿತಿ ಕೇಳಿ ಸರಕಾರಕ್ಕೆ ಪತ್ರ ಬರೆದರೂ ಉತ್ತರ ಲಭಿಸಿಲ್ಲ. ಸರಕಾರವೇ ಇದೆಲ್ಲವನ್ನೂ ಮುಚ್ಚಿಡುತ್ತಿದೆ ಎಂದು ಆರೋಪಿಸಿದರು. 16ರಿಂದ ಮಾಡು ಇಲ್ಲವೇ ಮಡಿ ಹೋರಾಟ ಎಂಬ ಎಚ್ಚರಿಕೆ ಗಂಟೆ ಎಂದು ತಿಳಿಸಿದರು .