ನವದೆಹಲಿ : ಭವಿಷ್ಯದ ಪೀಳಿಗೆಗೆ ಪರಿಸರ ರಕ್ಷಣೆ ನಮ್ಮ ಹೊಣೆ, ಪರಿಸರವನ್ನು ರಕ್ಷಿಸುವುದಲ್ಲದೆ, ಹೆಚ್ಚು ಚೈತನ್ಯಶೀಲವಾಗಿಸಲು, ಅದರ ಬಗ್ಗೆ ಜಾಗೃತ ಮತ್ತು ಸೂಕ್ಷ್ಮ ಜೀವನಶೈಲಿಯನ್ನು ಅಳವಡಿಸಿಕೊಳ್ಳುವಂತೆ ರಾಷ್ಟ್ರಪತಿ ದ್ರೌಪದಿ ಮುರ್ಮು ಶನಿವಾರ ಜನರನ್ನು ಕೇಳಿಕೊಂಡರು.
ವಿಜ್ಞಾನ ಭವನದಲ್ಲಿ ನಡೆದ ರಾಷ್ಟ್ರೀಯ ಪರಿಸರ ಸಮ್ಮೇಳನ -2025ನ್ನು ಉದ್ದೇಶಿಸಿ ಮಾತನಾಡಿದ ಅವರು, ಭವಿಷ್ಯದ ಪೀಳಿಗೆಗೆ ಶುದ್ಧ ಪರಿಸರದ ಪರಂಪರೆಯನ್ನು ಒದಗಿಸುವುದು ಜನರ ನೈತಿಕ ಕರ್ತವ್ಯವಾಗಿದೆ ಎಂದು ಹೇಳಿದರು. ಪರಿಸರ ಸಂರಕ್ಷಣೆಗೆ ಒತ್ತು ನೀಡಿದ ಮುರ್ಮು, ಭಾರತೀಯ ಅಭಿವೃದ್ಧಿ ಪರಂಪರೆಯ ಆಧಾರವು “ಪೋಷಣೆ, ಶೋಷಣೆಯಲ್ಲ; ರಕ್ಷಣೆ, ನಿರ್ಮೂಲನೆಯಲ್ಲ” ಎಂದು ಹೇಳಿದರು.
“ಈ ಪರಂಪರೆಯನ್ನು ಗಮನದಲ್ಲಿಟ್ಟುಕೊಂಡು, ನಾವು ಅಭಿವೃದ್ಧಿ ಹೊಂದಿದ ಭಾರತದತ್ತ ಮುನ್ನಡೆಯಲು ಬಯಸುತ್ತೇವೆ” ಎಂದು ರಾಷ್ಟ್ರಪತಿಗಳು ಹೇಳಿದರು. ಬುಡಕಟ್ಟು ಸಮುದಾಯದ ಜನರು ಶತಮಾನಗಳಿಂದ ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬದುಕುತ್ತಿದ್ದಾರೆ ಮತ್ತು ಅವರು ತಮ್ಮ ಜೀವನದ ಪ್ರತಿಯೊಂದು ಅಂಶದಲ್ಲೂ ಸುತ್ತಮುತ್ತಲಿನ ಪರಿಸರ, ಸಸ್ಯಗಳು ಮತ್ತು ಪ್ರಾಣಿಗಳನ್ನು ಅವಲಂಬಿಸಿದ್ದಾರೆ ಎಂದು ಮುರ್ಮು ಹೇಳಿದರು.