ಚಿತ್ರದುರ್ಗ : ಸಂವಿಧಾನದ ಮೂಲಕ ಪ್ರತಿಯೊಬ್ಬರಿಗೂ ಸಮಾನತೆ ನೀಡಿರುವ ಡಾ.ಬಿ.ಆರ್.ಅಂಬೇಡ್ಕರ್ ಹಿಂದೂ ಧರ್ಮದಲ್ಲಿ ಹುಟ್ಟಿ, ಹಿಂದೂವಾಗಿ ಸಾಯಲಾರೆ ಎಂದು ಬೌದ್ದ ಧರ್ಮಕ್ಕೆ ಸೇರಿದರು ಎಂದು ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಹೇಳಿದರು.
ಡಾ.ಬಿ.ಆರ್.ಅಂಬೇಡ್ಕರ್ರವರ 68 ನೇ ಮಹಾ ಪರಿನಿರ್ವಾಣ ದಿನದ ಅಂಗವಾಗಿ ಸಿದ್ದಾಪುರದಲ್ಲಿ ಶುಕ್ರವಾರ ಮಹಾನಾಯಕ ದಲಿತ ಸೇನೆ ಗ್ರಾಮ ಘಟಕ ಉದ್ಘಾಟಿಸಿ ಮಾತನಾಡಿದರು.
ಕೇವಲ ದಲಿತರೆನ್ನುವ ಕಾರಣಕ್ಕಾಗಿ ಡಾ.ಬಿ.ಆರ್.ಅಂಬೇಡ್ಕರ್ ಜೀವನದಲ್ಲಿ ಸಾಕಷ್ಟು ನೋವು, ಹಿಂಸೆ, ಅವಮಾನ, ಅಸ್ಪøಶ್ಯತೆಯನ್ನು ಅನುಭವಿಸಿದರು. ಯಾರು ಪಡೆಯದಷ್ಟು ಪದವಿಗಳನ್ನು ಪಡೆದಿದ್ದ ಅಂಬೇಡ್ಕರ್ರವರಲ್ಲಿದ್ದ ಜ್ಞಾನ, ವಿದ್ವತ್ತನ್ನು ಗುರುತಿಸಿ ಬರೋಡಾದ ರಾಜ ಶಿಕ್ಷಣಕ್ಕಾಗಿ ವಿದೇಶಕ್ಕೆ ಕಳಿಸಿ ಅಲ್ಲಿಂದ ಹಿಂದಿರುಗಿದ ನಂತರ ತಮ್ಮ ದೇಶದಲ್ಲಿಯೇ ಹುದ್ದೆ ಕೊಟ್ಟಾಗ ಅಲ್ಲಿನ ಜನರ ಕಿರುಕುಳ ತಾಳದೆ ಅಂಬೇಡ್ಕರ್ ಮುಂಬೈಗೆ ಹಿಂದಿರುಗಿದರು. ಶೋಷಣೆ, ಅವಮಾನ ತಾಳದೆ ಹಿಂದೂ ಧರ್ಮ ತ್ಯಜಿಸಿ 1956, ಅ.14 ರಂದು ಭೌದ್ದ ಧರ್ಮಕ್ಕೆ ಸೇರ್ಪಡೆಗೊಂಡರು ಎಂದು ತಿಳಿಸಿದರು.
ಹಿಂದೂ ಧರ್ಮದ ಅವನತಿಗೆ ಕೇವಲ ಕ್ರೈಸ್ತರು, ಇಸ್ಲಾಂ ಧರ್ಮದವರಷ್ಟೆ ಕಾರಣರಲ್ಲ. ಹಿಂದೂಗಳಲ್ಲಿನ ಕೆಲವು ಜಾತಿವಾದಿಗಳಿಂದಲೂ ಹಿಂದೂ ಧರ್ಮಕ್ಕೆ ಅಪಾಯವಿದೆ. ಪ್ರತಿ ಮನೆಯಲ್ಲಿಯೂ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ರವರನ್ನು ಪೂಜಿಸಿ ಅವರ ಆದರ್ಶ, ತತ್ವ, ಸಿದ್ದಾಂತಗಳನ್ನು ಮೈಗೂಡಿಸಿಕೊಂಡಾಗ ಮಾತ್ರ
ಸಂವಿಧಾನವನ್ನು ನಿಜವಾಗಿಯೂ ಗೌರವಿಸಿದಂತಾಗುತ್ತದೆ ಎಂದರು. ಜಾತಿ ಅಮಲನ್ನು ತಲೆಗೆ ಏರಿಸಿಕೊಂಡಿರುವ ಹಿಂದೂ ಧರ್ಮದ ಕೆಲವರಿಂದ ದಲಿತರ ಮೇಲೆ ನಿರಂತರವಾಗಿ ದೌರ್ಜನ್ಯ, ದಬ್ಬಾಳಿಕೆ ನಡೆಯುತ್ತಿದೆ. ಚಿಕ್ಕಮಗಳೂರು ತಾಲ್ಲೂಕಿನ ನರಸೀಪುರ ಗ್ರಾಮದ ತಿರುಮಲ ದೇವಸ್ಥಾನದೊಳಗೆ ದಲಿತ ಯುವಕನೋರ್ವ ಪ್ರವೇಶಿಸಿದ ಎನ್ನುವ ಕಾರಣಕ್ಕಾಗಿ ಎರಡು ದಿನಗಳಿಂದಲೂ ಅಲ್ಲಿ ಪೂಜೆ ಮಾಡಿಲ್ಲವೆನ್ನುವುದಾದರೆ ಇದ್ಯಾವ ನ್ಯಾಯ ಎಂದು ಪ್ರಶ್ನಿಸಿದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಡಾ.ಬಿ.ಆರ್.ಅಂಬೇಡ್ಕರ್ರವರ ಆಸೆಯಂತೆ ಶಿಕ್ಷಣ, ಸಂಘಟನೆ, ಹೋರಾಟದಿಂದ ದಲಿತರು ಜೀವನದಲ್ಲಿ ಬದಲಾವಣೆ ಕಂಡುಕೊಳ್ಳಬೇಕು. ಶಿಕ್ಷಣಕ್ಕಾಗಿ ಸರ್ಕಾರ ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡುತ್ತಿದೆ. ಸದ್ಬಳಕೆ ಮಾಡಿಕೊಳ್ಳುವಂತೆ ಕರೆ ನೀಡಿದರು.
ಮಹಾನಾಯಕ ದಲಿತ ಸೇನೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಮಂಜುನಾಥ್ ತಾಳಿಕೆರೆ, ಪ್ರಧಾನ ಕಾರ್ಯದರ್ಶಿ ಹೊಳೆಯಪ್ಪ ಕೆ.ಸಾಕ್ಯ, ಜಿಲ್ಲಾ ಉಪಾಧ್ಯಕ್ಷ ದುರುಗೇಶ್, ಗ್ರಾಮ ಘಟಕದ ಅಧ್ಯಕ್ಷ ಲೋಕೇಶ್, ಸಿದ್ದಾಪುರ ಗ್ರಾಮದ ಮುಖಂಡರಾದ ಅಂಜಿನಪ್ಪ, ಜಗದೀಶ್, ಪ್ರಭುಲಿಂಗ ವೇದಿಕೆಯಲ್ಲಿದ್ದರು.