ನವದೆಹಲಿ : ಕಾಂಗ್ರೆಸ್ ಹಾಗೂ ವಿರೋಧ ಪಕ್ಷಗಳ ನಡುವೆ ಭಾರೀ ರಾಜಕೀಯ ಸಮರಕ್ಕೆ ಕಾರಣವಾಗಿದ್ದ ಮುಡಾ ನಿವೇಶನ ಹಗರಣಕ್ಕೆ ಸ್ಫೋಟಕ ತಿರುವು ಸಿಕ್ಕಿದೆ. ಸಿಎಂ ಸಿದ್ದರಾಮಯ್ಯ ಪತ್ನಿ ಬಿ.ಎಂ. ಪಾರ್ವತಿ ಅವರಿಗೆ 14 ಹಸ್ತಾಂತರದ ಹಿಂದೆ ಅವ್ಯವಹಾರಗಳು ನಡೆದಿರುವುದಕ್ಕೆ ಸಾಕ್ಷ್ಯಗಳು ಪತ್ತೆಯಾಗಿವೆ ಎಂದು ಇ.ಡಿ ಬಹಿರಂಗಪಡಿಸಿದೆ.
ಇದೇ ವೇಳೆ, ಮುಡಾದಿಂದ ಬೇನಾಮಿ ಹಾಗೂ ಇನ್ನಿತರೆ ವ್ಯವಹಾರಗಳ ಮೂಲಕ 1095 ನಿವೇಶನಗಳನ್ನು ಆಕ್ರಮವಾಗಿ ಹಂಚಿಕೆ ಮಾಡಲಾಗಿದೆ. ಇದರ ಮೌಲ್ಯ ಬರೋಬ್ಬರಿ 700 ಕೋಟಿ ರು. ಎಂದು ತನಿಖೆಯಲ್ಲಿ ಪತ್ತೆಯಾಗಿದೆ ಎಂದು ಹೇಳಿದೆ. ಈ ಸಂಬಂಧ ಇತ್ತೀಚೆಗೆ ಕರ್ನಾಟಕ ಲೋಕಾಯುಕ್ತ ಇಲಾಖೆಗೆ ಇ.ಡಿ. ಪತ್ರ ಬರೆದಿದೆ. ‘ಪಾರ್ವತಿ ಅವರಿಗೆ ಭೂ ಹಸ್ತಾಂತರದಲ್ಲಿ ಮಾರ್ಗಸೂಚಿಗಳ ಉಲ್ಲಂಘನೆಯಾಗಿದೆ.
ಸಾಕ್ಷ್ಯ ತಿರುಚುವಿಕೆಯ ಪುರಾವೆ ಲಭಿಸಿವೆ. ಕಚೇರಿ ಕಾರ್ಯವಿಧಾನಗಳ ಉಲ್ಲಂಘನೆ ಆಗಿದೆ. ಕೆಲವು ವ್ಯಕ್ತಿಗಳ ಪರ ಲಾಬಿ ನಡೆಸಲಾಗಿದೆ ಹಾಗೂ ಪ್ರಭಾವ ಬಳಸಲಾಗಿದೆ ಮತ್ತು ಪೋರ್ಜರಿ ಸಹಿಗಳ ಸಾಕ್ಷ್ಯಗಳು ನಮ್ಮ ತನಿಖೆ ವೇಳೆ ಪತ್ತೆಯಾಗಿವೆ’ ಎಂದು ಇ.ಡಿ. ತಿಳಿಸಿದೆ. ಸಿದ್ದರಾಮಯ್ಯ ಅವರ ಆಪ್ತ ಸಹಾಯಕರಲ್ಲಿ ಒಬ್ಬರಾದ ಎಸ್.ಜಿ. ದಿನೇಶ್ ಕುಮಾರ್ ಅಲಿಯಾಸ್ ಸಿ.ಟಿ, ಕುಮಾರ್ ಅವರು ನಿವೇಶನ ಹಂಚಿಕೆ ಪ್ರಕ್ರಿಯೆಯಲ್ಲಿ ‘ಅನಾವಶ್ಯಕ ಪ್ರಭಾವ’ ಬೀರಿದ್ದರು ಎಂಬುದಕ್ಕೆ ಸಾಕ್ಷ್ಯ ಲಭಿಸಿದೆ.
‘ಸೈಟ್ ಹಂಚಿಕೆಯಲ್ಲಿ ಶಾಸನಬದ ಮಾರ್ಗಸೂಚಿಗಳನ್ನು ಉಲ್ಲಂಘಿಸಿ 14 ಸೈಟ್ ಪಾರ್ವತಿ ಅವರಿಗೆ ಕಾನೂನುಬಾಹಿರವಾಗಿ ಹಂಚಲಾಗಿದೆ ಎಂದು ಸ್ಪಷ್ಟವಾಗಿ ಗಮನಿಸಬಹುದು’ ಎಂದು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಕಳುಹಿಸಲಾದ ಇತ್ತೀಚಿನ ಸಂವಹನದಲ್ಲಿ ಲೋಕಾಯುಕ್ತ ಇಲಾಖೆಗೆ ಇ.ಡಿ ಮಾಹಿತಿ ನೀಡಿದೆ.