ಬೆಂಗಳೂರು: ಚಿನ್ನಾಭರಣ ಮಳಿಗೆಯಲ್ಲಿ ಗಣ್ಯರ ಹೆಸರು ಬಳಸಿಕೊಂಡು ಕೋಟ್ಯಂತರ ಮೌಲ್ಯದ ಆಭರಣ ಖರೀದಿಸಿ ಹಣ ಪಾವತಿಸದೆ ವಂಚಿಸಿದ್ದ ಮಾಜಿ ಸಚಿವ ವರ್ತೂರು ಪ್ರಕಾಶ್ ಸ್ನೇಹಿತೆಯನ್ನು ಪುಲಿಕೇಶಿನಗರ ಉಪ ವಿಭಾಗದ ಪೊಲೀಸರು ಬಂಧಿಸಿದ್ದು, ಆರೋಪಿಯಿಂದ ಚಿನ್ನ ಹಾಗೂ ಕಾರು ಸೇರಿದಂತೆ ಇತರ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ಬಾಗಲಗುಂಟೆ ನಿವಾಸಿ ಶ್ವೇತಾಗೌಡ ಬಂಧಿತ ಆರೋಪಿ. ಕೆಲ ದಿನಗಳ ಹಿಂದೆ ಅವಿನ್ಯೂ ರಸ್ತೆಯ ನವರತ್ನ ಜ್ಯುವೆಲರ್ಸ್ ಮಳಿಗೆಯಲ್ಲಿ ಸುಮಾರು 2.42 ಕೋಟಿ ರು. ಮೌಲ್ಯದ ಆಭರಣವನ್ನು ಖರೀದಿಸಿ ಶ್ವೇತಾ ವಂಚಿಸಿದ್ದಳು. ಈ ಬಗ್ಗೆ ತನಿಖೆ ಕೈಗೆತ್ತಿಕೊಂಡ ಎಸಿಪಿ ಗೀತಾ ನೇತೃತ್ವದ ತಂಡವು, ತಾಂತ್ರಿಕ ಮಾಹಿತಿ ಆಧರಿಸಿ ಮೈಸೂರಿನಲ್ಲಿ ಆಕೆಯನ್ನು ಬಂಧಿಸಿ ನಗರಕ್ಕೆ ಕರೆತಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ನವರತ್ನ ಜ್ಯುವೆಲರ್ಸ್ ಮಳಿಗೆ ಸಿಬ್ಬಂದಿ ತಮ್ಮ ಮಳಿಗೆಯಲ್ಲಿ ಶ್ವೇತಾ ಖರೀದಿಸಿದ್ದ 2.945 ಕೆಜಿ ಚಿನ್ನವನ್ನು ನಗರದ ಡಾಲರ್ಸ್ ಕಾಲೋನಿಯಲ್ಲಿರುವ ಮಾಜಿ ಸಚಿವ ಹಾಗೂ ಕೋಲಾರ ಜಿಲ್ಲಾ ಬಿಜೆಪಿ ಮುಖಂಡ ವರ್ತೂರು ಪ್ರಕಾಶ್ ಅವರ ಮನೆಗೆ ತಲುಪಿಸಿದ್ದರು. ಶ್ವೇತಾ ಮಾಜಿ ಸಚಿವರ ಮನೆ ವಿಳಾಸವನ್ನೇ ಸಿಬ್ಬಂದಿಗೆ ಕೊಟ್ಟಿದ್ದಳು. ಹಾಗಾಗಿ ಈ ಪ್ರಕರಣದಲ್ಲಿ ಮಾಜಿ ಸಚಿವರಿಗೆ ಸಹ ತನಿಖೆ ಸಂಕಷ್ಟ ಎದುರಾಗಿದ್ದು, ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಸಾಮಾಜಿಕ ಚಟುವಟಿಕೆಗಳಲ್ಲಿ ಗುರುತಿಸಿಕೊಂಡಿದ್ದ ಶ್ವೇತಾಗೌಡ, ಸುಲಭವಾಗಿ ಹಣ ಸಂಪಾದಿಸಲು ಅಡ್ಡದಾರಿ ತುಳಿದಿದ್ದಳು. ಹಾಗಾಗಿ ತಾನು ಚಿನ್ನಾಭರಣ ವ್ಯಾಪಾರ ಮಾಡುವುದಾಗಿ ಎಂದೇಳಿ ಕೆಲ ಚಿನ್ನ ವ್ಯಾಪಾರಿಗಳಿಂದ ಸಗಟು ದರದಲ್ಲಿ ಆಭರಣ ಖರೀದಿಸಿ ಆಕೆ ವಂಚಿಸುತ್ತಿದ್ದಳು.