ಸ್ಯಾನ್ ಫ್ರಾನ್ಸಿಸ್ಕೋ: ಸರ್ವಕಾಲಿಕ ಶ್ರೇಷ್ಠ ತಬಲಾ ಮಾಂತ್ರಿಕ ಜಾಕೀರ್ ಹುಸೇನ್ ಇಹಲೋಕ ತ್ಯಜಿಸಿದ್ದಾರೆ ಎಂದು ಅವರ ಕುಟುಂಬ ಸೋಮವಾರ (ಡಿಸೆಂಬರ್ 16) ಮುಂಜಾನೆ ತಿಳಿಸಿದೆ. ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದ ಹುಸೇನ್ ಚಿಕಿತ್ಸೆ ಫಲಿಸದೆ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಜಾಕಿರ್ ಹುಸೇನ್ ಅವರು 73 ವಯಸ್ಸಾಗಿದ್ದು ಇಡಿಯೋಪಥಿಕ್ ಪಲ್ಮನರಿ ಫೈಬ್ರೋಸಿಸ್ (idiopathic pulmonary fibrosis) ನಿಂದ ನಿಧನರಾದರು ಎಂದು ಅವರ ಕುಟುಂಬದಿಂದ ಅಧಿಕೃತ ಮಾಹಿತಿ ಹೊರ ಬಿದ್ದಿದೆ. ಹುಸೇನ್ ಅವರನ್ನು ಕಳೆದ ಎರಡು ವಾರಗಳಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಭಾನುವಾರ ರಾತ್ರಿ (ಭಾರತೀಯ ಕಾಲಮಾನ) ಅವರ ಸ್ಥಿತಿ ಹದಗೆಟ್ಟಿದ್ದರಿಂದ ಅವರನ್ನು ಐಸಿಯುಗೆ ಕರೆದೊಯ್ಯಲಾಯಿತು.
ಭಾನುವಾರ ರಾತ್ರಿಯೇ ಅವರ ಸಾವಿನ ಬಗ್ಗೆ ವರದಿಯಾಗಿತ್ತು. ಆದರೆ ಅವರ ಕುಟುಂಬವು ಅದನ್ನು ಅಲ್ಲಗಳೆದಿತ್ತು. ಅವರು ಜೀವಂತವಾಗಿದ್ದಾರೆ ಎಂದು ಖಚಿತಪಡಿಸಿತ್ತು. ಹುಸೇನ್ ಅವರು ಪತ್ನಿ ಅಂಟೋನಿಯಾ ಮಿನ್ನೆಕೋಲಾ, ಪುತ್ರಿಯರಾದ ಅನಿಸಾ ಖುರೇಷಿ ಮತ್ತು ಇಸಾಬೆಲ್ಲಾ ಖುರೇಷಿ, ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ. ಉಸ್ತಾದ್ ಜಾಕಿರ್ ಹುಸೇನ್ ಭಾರತೀಯ ತಬಲಾ ವಾದಕ, ಸಂಯೋಜಕ, ಸಾರ್ವಕಾಲಿಕ ಶ್ರೇಷ್ಠ ತಬಲಾ ವಾದಕ.
ತಬಲಾ ಅಂದ್ರೆ ಝಾಕೀರ್, ಝಾಕೀರ್ ಅಂದ್ರೆ ತಬಲಾ. ಸಂಗೀತಗಾರ ಝಾಕೀರ್ ಹುಸೇನ್ ಇನ್ನು ನೆನಪು ಮಾತ್ರ.