ದಾವಣಗೆರೆ : ಪ್ರಸಕ್ತ ಸಾಲಿನ ಹಿಂಗಾರು ಹಂಗಾಮಿನಲ್ಲಿ ರೈತರಿಂದ ಬೆಂಬಲ ಬೆಲೆಯಲ್ಲಿ ಭತ್ತ ಖರೀದಿಗೆ ನೊಂದಣಿ ಅವಧಿಯನ್ನು ಮೇ 31 ರ ವರೆಗೆ ವಿಸ್ತರಿಸಿ ಸರ್ಕಾರ ಆದೇಶಿಸಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಟಾಸ್ಕ್ ಪೋರ್ಸ್ ಸಮಿತಿ ಅಧ್ಯಕ್ಷರಾದ ಜಿ.ಎಂ.ಗಂಗಾಧರಸ್ವಾಮಿ ತಿಳಿಸಿದ್ದಾರೆ.
ಕ್ವಿಂಟಾಲ್ ಭತ್ತಕ್ಕೆ ಎ.ಗ್ರೇಡ್ ರೂ.2320, ಸಾಮಾನ್ಯ ಭತ್ತ ರೂ. 2300 ಗಳ ಬೆಂಬಲ ಬೆಲೆಯಲ್ಲಿ ಖರೀದಿ ಮಾಡಲು ಜಗಳೂರು ಹೊರತುಪಡಿಸಿ ಎಲ್ಲಾ ಎಪಿಎಂಸಿಗಳಲ್ಲಿ ಖರೀದಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಪ್ರತಿ ರೈತರಿಂದ 25 ಕ್ವಿಂಟಾಲ್ನಿಂದ ಗರಿಷ್ಠ 50 ಕ್ವಿಂಟಾಲ್ವರೆಗೆ ಖರೀದಿ ಮಾಡಲಾಗುತ್ತದೆ. ಭತ್ತ ಕಟಾವು ನಡೆಯುತ್ತಿರುವುದರಿಂದ ಬೆಂಬಲ ಬೆಲೆಯಲ್ಲಿ ಭತ್ತ ಖರೀದಿ ನೊಂದಣಿ ದಿನಾಂಕವನ್ನು ವಿಸ್ತರಣೆ ಮಾಡಲು ಜಿಲ್ಲಾಧಿಕಾರಿಯವರು ಪತ್ರ ಬರೆದ ಮೇರೆಗೆ ಅವಧಿ ವಿಸ್ತರಣೆ ಮಾಡಲಾಗಿದ್ದು ಮತ್ತೆ ನೊಂದಣಿ ಹಾಗೂ ಖರೀದಿ ಅವಧಿ ವಿಸ್ತರಣೆ ಮಾಡಲಾಗುವುದಿಲ್ಲ. ರೈತರು ತಾವು ಬೆಳೆದ ಭತ್ತವನ್ನು ಖರೀದಿ ಕೇಂದ್ರಗಳಲ್ಲಿ ಮಾರಾಟ ಮಾಡಲು ನೊಂದಾಯಿಸಲು ಅವರು ತಿಳಿಸಿದ್ದಾರೆ.