ಮುಂಬೈ: ಮಹಾರಾಷ್ಟ್ರದ ಆಡಳಿತಾರೂಢ ಮಹಾಯುತಿ ಮೈತ್ರಿಕೂಟದಲ್ಲಿ ಬಿರುಕು ಹೆಚ್ಚಾಗುತ್ತಿದೆ ಎಂಬ ಊಹಾಪೋಹಗಳ ಮಧ್ಯೆ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ನೇತೃತ್ವದ ಗೃಹ ಇಲಾಖೆಯು ಡಿಸಿಎಂ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯ 20 ಶಾಸಕರಿಗೆ ನೀಡಲಾಗಿದ್ದ Y-ಭದ್ರತೆ ರಕ್ಷಣೆಯನ್ನು ಹಿಂತೆಗೆದುಕೊಂಡಿದೆ ಎಂದು ಮೂಲಗಳು ತಿಳಿಸಿವೆ.
ಮೂಲಗಳ ಪ್ರಕಾರ, ಬಿಜೆಪಿ ಹಾಗೂ ಅಜಿತ್ ಪವಾರ್ ಬಣದ ಎನ್ ಸಿಪಿಯ ಕೆಲವು ಶಾಸಕರ ಭದ್ರತೆಯನ್ನು ಹಿಂಪಡೆಯಲಾಗಿದೆ ಎಂದು ತಿಳಿಸಿದೆ. ಆದರೆ ಈ ಸಂಖ್ಯೆ ಶಿವಸೇನೆಗಿಂತ ಕಡಿಮೆಯಾಗಿರುವುದಾಗಿ ವರದಿ ವಿವರಿಸಿದೆ. 2022ರಲ್ಲಿ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಯಿಂದ ಪಕ್ಷಾಂತರಗೊಂಡ ನಂತರ ಈ ಶಾಸಕರಿಗೆ ವೈ ಶ್ರೇಣಿಯ ಭದ್ರತೆಯನ್ನು ಒದಗಿಸಲಾಯಿತು. ಬಳಿಕ ಕಾಂಗ್ರೆಸ್ ಎನ್‌ಸಿಪಿ ಶಿವಸೇನೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರದ ಪತನಕ್ಕೆ ಕಾರಣವಾಯಿತು. ಫಡ್ನವಿಸ್ ಸರ್ಕಾರದ ನಿರ್ಧಾರವು ಏಕನಾಥ್ ಶಿಂಧೆ ನೇತೃತ್ವದ ಶಿವಸೇನಾ ಮತ್ತು ಬಿಜೆಪಿ ನಡುವೆ ನಡೆಯುತ್ತಿರುವ ಉದ್ವಿಗ್ನತೆಯನ್ನು ತೀವ್ರಗೊಳಿಸುವ ಸಾಧ್ಯತೆಯಿದೆ ಎನ್ನಲಾಗಿದೆ.
ರಾಜ್ಯ ಸರ್ಕಾರದ ಸಂಪನ್ಮೂಲಗಳ ದುರುಪಯೋಗಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ದೇವೇಂದ್ರ ಫಡ್ನವೀಸ್ ನೇತೃತ್ವದ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಮೂಲಗಳು ತಿಳಿಸಿವೆ. ಸಂಪುಟದಲ್ಲಿನ ಸಚಿವರುಗಳ ಹೊರತಾಗಿಯೂ ಈ ಶಾಸಕರುಗಳಿಗೆ ವೈ ಭದ್ರತೆಯನ್ನು ನೀಡಲಾಗಿತ್ತು. ಉದ್ಧವ್ ಠಾಕ್ರೆ ಬಣವನ್ನು ತೊರೆದು ಶಿಂಧೆ ಬಣ ಸೇರಿದ ನಂತರ ಈ ಶಾಸಕರುಗಳಿಗೆ ಭದ್ರತೆ ನೀಡಲಾಗಿತ್ತು.
ಈ ನಿರ್ಧಾರ ಶಿವಸೇನೆ ಮತ್ತು ಬಿಜೆಪಿ ಮೈತ್ರಿ ನಡುವೆ ನಡೆಯುತ್ತಿರುವ ಶೀತಲ ಸಮರ ಇನ್ನಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಕಳೆದ ತಿಂಗಳು ನಡೆದ ಕಾರ್ಯಕ್ರಮದಲ್ಲಿ ಫಡ್ನವೀಸ್ ಜತೆ ವೇದಿಕೆ ಹಂಚಿಕೊಳ್ಳದೆ, ಕಾರ್ಯಕ್ರಮಕ್ಕೆ ಗೈರುಹಾಜರಾಗಿದ್ದರು. ಅಲ್ಲದೇ ಫಡ್ನವೀಸ್ ಕರೆದ ನಾಸಿಕ್ ಮೆಟ್ರೋಪೊಲಿಟಿಯನ್ ರೀಜನಲ್ ಡೆವಲಪ್ ಮೆಂಟ್ ಅಥಾರಿಟಿ ಸಭೆಗೂ ಗೈರುಹಾಜರಾಗಿದ್ದರು.