ಬೆಳಗಾವಿ : ಗೋಕಾಕ ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ಕರ್ನಲ್ ಸೋಫಿಯಾ ಖುರೇಶಿ ಅವರ ಮಾವ ಗೌಸ್ ಬಾಗೇವಾಡಿ ನಿವಾಸದ ಮೇಲೆ ದಾಳಿ ನಡೆದಿದೆ ಎಂಬ ಸುದ್ದಿಯು ಸಂಪೂರ್ಣ ಸುಳ್ಳು ಎಂದು ಬೆಳಗಾವಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಭೀಮಾಶಂಕರ ಗುಳೇದ ಸ್ಪಷ್ಟಪಡಿಸಿದ್ದಾರೆ.
ಅನೀಸ್ ಉದ್ದೀನ್ ಎಂಬ ಕಿಡಿಗೇಡಿಯೊಬ್ಬ ತನ್ನ ‘ಎಕ್ಸ್ʼ ಖಾತೆಯಲ್ಲಿ ಕರ್ನಲ್ ಸೋಫಿಯಾ ಖುರೇಷಿ ಗಂಡನ ಮನೆ ಮೇಲೆ ಆರ್ಎಸ್ಎಸ್ ಅಟ್ಯಾಕ್ ಮಾಡಿದೆ ಎಂದು ಪೋಸ್ಟ್ ಮಾಡಿದ್ದಾನೆ. ಕರ್ನಲ್ ಸೋಫಿಯಾ ಅವರ ಫೋಟೋ ಜೊತೆಗೆ, ಮನೆಯೊಂದು ಧ್ವಂಸವಾಗಿರುವ ಯಾವುದೋ ಹಳೆ ಪೋಟೋವನ್ನು ಬಳಸಿಕೊಂಡು ಪೋಸ್ಟ್ ಮಾಡಿದ್ದ. ಅಲ್ಲದೆ ದಾಳಿಕೋರರಿಂದ ತಪ್ಪಿಸಿಕೊಳ್ಳಲು ಖುರೇಷಿ ಅವರ ಕುಟುಂಬವನ್ನು ದಿಲ್ಲಿಗೆ ಸ್ಥಳಾಂತರ ಮಾಡಲಾಗಿದೆ ಎಂದು ಬರೆದುಕೊಂಡಿದ್ದ.
ದ್ವೇಷಪೂರಿತವಾಗಿದ್ದ ಈ ಪೋಸ್ಟ್ ಸಾಕಷ್ಟು ವೈರಲ್ ಆಗಿತ್ತು. ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ ವಿಚಾರ ಗೊತ್ತಾಗುತ್ತಿದ್ದಂತೆ, ಬೆಳಗಾವಿ ಪೊಲೀಸರು ಸೋಫಿಯಾ ಖುರೇಷಿ ಅವರ ಗಂಡನ ಮನೆಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಬೆಳಗಾವಿ ಎಸ್ಪಿ ಡಾ.ಭೀಮಾಶಂಕರ್ ಗುಳೇದ್, ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಕೊಣ್ಣೂರ ಗ್ರಾಮದ ಖುರೇಷಿ ಮಾವನ ಮನೆ ಇದೆ. ಅಲ್ಲಿ ಆರ್ಎಸ್ಎಸ್ ಬೆಂಬಲಿತ ಹಿಂದೂಗಳು ದಾಳಿ ಮಾಡಿ ಮನೆ ಧ್ವಂಸ ಮಾಡಿದ್ದಾರೆ ಅಂತಾ, ಅವರ ಕುಟುಂಬ ಬೇರೆ ಕಡೆ ಶಿಫ್ಟ್ ಆಗಿದ್ದಾರೆ ಎಂದು ಎಕ್ಸ್ ಖಾತೆಯಲ್ಲಿ ಅನಿಸ್ ಉದ್ದೀನ್ ಹಂಚಿಕೊಂಡಿದ್ದ. ಕೂಡಲೇ ಪೋಸ್ಟ್ ಗಮನಕ್ಕೆ ಬರುತ್ತಿದ್ದಂತೆ ಸುಳ್ಳು ಸುದ್ದಿ ಅಂತಾ ನಾನು ಕಮೆಂಟ್ ಮಾಡಿದೆ.
ಕೂಡಲೇ ಆತ ಪೋಸ್ಟ್ನ ಡಿಲೀಟ್ ಮಾಡಿದ್ದಾನೆ ಎಂದು ಹೇಳಿದ್ದಾರೆ.