ಚಿತ್ರದುರ್ಗ : ಕೃಷಿ ಇಲಾಖೆಯಿಂದ ಕಳಪೆ ತೊಗರಿ ಬೀಜ ವಿತರಿಸಿರುವುದನ್ನು ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ತೊಗರಿ ಗಿಡಗಳನ್ನು ಪ್ರದರ್ಶಿಸಿ ಗುರುವಾರ ಪ್ರತಿಭಟನೆ ನಡೆಸಲಾಯಿತು.
ಮುಂಗಾರು ಹಂಗಾಮಿನಲ್ಲಿ ಕೃಷಿ ಇಲಾಖೆ ರೈತ ಸಂಪರ್ಕ ಕೇಂದ್ರದಲ್ಲಿ ಗುಣ ಮಟ್ಟದ ತೊಗರಿ ಬೀಜ ಸಿಗುತ್ತದೆಂದು ನಂಬಿ ರೈತರು ಖರೀಧಿಸಿ ಬಿತ್ತನೆ ಮಾಡಿ ಆರೇಳು ತಿಂಗಳಾಗಿದೆ. ಗಿಡ ನೋಡಲು ದಷ್ಟಪುಷ್ಟವಾಗಿ ಬೆಳೆದಿದ್ದರೂ ಹೂವು ಕಾಯಿ ಕಟ್ಟಿಲ್ಲ. ಒಂದು ಎಕರೆ ಬಿತ್ತನೆಗಾಗಿ 35 ರಿಂದ 40 ಸಾವಿರ ರೂ.ಗಳ ಖರ್ಚಾಗಿದೆ. ಕೃಷಿ ಇಲಾಖೆ ಅಧಿಕಾರಿಗಳು ತೊಗರಿ ಹೊಲಗಳಿಗೆ ಭೇಟಿ ನೀಡಿ ಪರಿಶೀಲಿಸಿ ಹಾನಿಗೊಳಗಾಗಿರುವ ರೈತರಿಗೆ ಪರಿಹಾರ ನೀಡಬೇಕಂದು ಪ್ರತಿಭಟನಾನಿರತರು ಒತ್ತಾಯಿಸಿದರು.
ಮುಂಗಾರು ಹಿಂಗಾರು ಹಂಗಾಮಿನಲ್ಲಿ ಅಧಿಕ ಮಳೆ ಸುರಿದ ಪರಿಣಾಮ ಹೊಲಗಳಲ್ಲಿಯೇ ಈರುಳ್ಳಿ ಕೊಳೆತಿದೆ. ಶೇಂಗಾ ಜೊಳ್ಳಾಗಿದೆ. ಇದೆ ರೀತಿ ಇನ್ನು ಅನೇಕ ಬೆಳೆಗಳು ಹಾನಿಯಾಗಿದ್ದು, ರೈತ ಸಾಲಕ್ಕೆ ಸಿಲುಕಿದ್ದಾನೆ. ಕೂಡಲೆ ಬೆಳೆ ಪರಿಹಾರ ಹಾಗೂ ಬೆಳೆವಿಮೆಯನ್ನು ಬಿಡುಗಡೆಗೊಳಿಸುವಂತೆ ರೈತರು ಸರ್ಕಾರವನ್ನು ಆಗ್ರಹಿಸಿದರು.
ವಿದ್ಯುತ್ ಅಕ್ರಮ-ಸಕ್ರಮವನ್ನು ದಿನಾಂಕ : 22-9-2023 ರಂದು ಸರ್ಕಾರ ರದ್ದುಪಡಿಸಿದ್ದು, ಸ್ವಂತ ಖರ್ಚಿನಿಂದ ರೈತರು ವಿದ್ಯುತ್ ಸಂಪರ್ಕ ಪಡೆಯಲು 3 ರಿಂದ 4 ಲಕ್ಷ ರೂ.ಗಳ ಖರ್ಚಾಗಿದೆ. ಕೂಡಲೆ ಸರ್ಕಾರ ಅಕ್ರಮ-ಸಕ್ರಮ ಮರುಜಾರಿಗೊಳಿಸಬೇಕು. ದಿನಕ್ಕೆ ಏಳು ಗಂಟೆಗಳ ಕಾಲ ವಿದ್ಯುತ್ ಪೂರೈಸುವುದಾಗಿ ರೈತರಿಗೆ ನಂಬಿಸಿ ವಂಚಿಸುತ್ತಿದೆ. ಗೋನೂರು ಎಫ್-4 ಫೀಡರ್ನಲ್ಲಿ ಕೇವಲ ಆರು ಗಂಟೆಗಳ ಕಾಲ ಪೂರೈಕೆಯಾಗುತ್ತಿದೆ. ಸಂಜೆ 6 ರಿಂದ ಬೆಳಿಗ್ಗೆ ಆರು ಗಂಟೆವರೆಗೆ ಓಪನ್ ಡೆಲ್ಟಾ ಕೊಡಬೇಕೆಂಬ
ನಿಯಮವಿದ್ದರೂ ವಿದ್ಯುತ್ ಸರಬರಾಜಾಗುತ್ತಿಲ್ಲ. ಈ ಭಾಗದ ಜಮೀನುಗಳಲ್ಲಿ ನೂರಾರು ಕುಟುಂಬಗಳು ವಾಸಿಸುತ್ತಿದ್ದು, ರಾತ್ರಿ ವೇಳೆ ಮಕ್ಕಳ ಶಿಕ್ಷಣಕ್ಕೂ ತೊಂದರೆಯಾಗುತ್ತಿದೆ. ವಿಷ ಜಂತುಗಳ ಭಯ ಹೆಚ್ಚಾಗಿರುವುದರಿಂದ ರಾತ್ರಿ ವಿದ್ಯುತ್ ಸರಬರಾಜಿನಲ್ಲಿ ಅಡಚಣೆಯುಂಟು ಮಾಡಬಾರದೆಂದು ರೈತರು ವಿನಂತಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಕೆ.ಪಿ.ಭೂತಯ್ಯ, ಜಿಲ್ಲಾಧ್ಯಕ್ಷ ಧನಂಜಯ, ಉಪಾಧ್ಯಕ್ಷ ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ತಾಲ್ಲೂಕು ಅಧ್ಯಕ್ಷ ಟಿ.ಹಂಪಣ್ಣ, ಬಸ್ತಿಹಳ್ಳಿ ಜಿ.ಸುರೇಶ್ಬಾಬು, ಬಿ.ಓ.ಶಿವಕುಮಾರ್, ಚೇತನ ಯಳನಾಡು, ತಿಪ್ಪೇಸ್ವಾಮಿ, ಎಂ.ಲಕ್ಷ್ಮಿಕಾಂತ, ಗೌಸ್ಪೀರ್ ಇನ್ನು ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.