ನವದೆಹಲಿ : ಟೆನಿಸ್ ಅಕಾಡೆಮಿಯನ್ನು ನಡೆಸುತ್ತಿದ್ದ ಟೆನಿಸ್ ಆಟಗಾರ್ತಿ ರಾಧಿಕಾ ಯಾದವ್ ತನ್ನ ತಂದೆಯಿಂದಲೇ ಭೀಕರವಾಗಿ ಕೊಲೆಯಾಗಿದ್ದಾರೆ.
ಗುರುಗ್ರಾಮದಲ್ಲಿರುವ ತಮ್ಮ ಮೂರು ಅಂತಸ್ತಿನ ಮನೆಯ ಅಡುಗೆಮನೆಯಲ್ಲಿ ಬೆಳಿಗ್ಗೆ 10.30ರ ಸುಮಾರಿಗೆ ಅಡುಗೆ ಮಾಡುತ್ತಿದ್ದಾಗ ರಾಧಿಕಾ ಅವರ ಹಿಂಭಾಗಕ್ಕೆ 3 ಬಾರಿ ಗುಂಡು ಹಾರಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಇದರಿಂದ ಗಾಯಗಳಾಗಿ ಅವರು ತಕ್ಷಣವೇ ಸಾವನ್ನಪ್ಪಿದ್ದಾರೆ.
ಕೊಲೆ ಆರೋಪಿ ಹಾಗೂ ಮೃತ ಯುವತಿಯ ತಂದೆ ದೀಪಕ್ ಯಾದವ್ ಅವರನ್ನು ಬಂಧಿಸಲಾಗಿದೆ. ಅವರ ಬಳಿಯಿದ್ದ ಲೈಸೆನ್ಸ್ ಪಡೆದ ರಿವಾಲ್ವರ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಈ ಘಟನೆಯ ಪ್ರಾಥಮಿಕ ತನಿಖೆಯಲ್ಲಿ ರಾಧಿಕಾ ಯಾದವ್ ಅವರ 51 ವರ್ಷದ ತಂದೆ ತಮ್ಮ ಮಗಳು ಸ್ವಂತ ಟೆನಿಸ್ ಅಕಾಡೆಮಿ ನಡೆಸುತ್ತಿದ್ದುದಕ್ಕೆ ಅಸಮಾಧಾನಗೊಂಡಿದ್ದರು ಎಂದು ತಿಳಿದುಬಂದಿದೆ.
ಪೊಲೀಸರ ಪ್ರಕಾರ, ದೀಪಕ್ ಯಾದವ್ ಅವರ ಗ್ರಾಮಸ್ಥರು ಮತ್ತು ಗೆಳೆಯರಿಂದ ಬಂದ ನಿಂದನೆಗಳಿಂದ ಕೋಪಗೊಂಡಿದ್ದರು. ಅವರ ಗೆಳೆಯರು, ಸಂಬಂಧಿಕರು ದೀಪಕ್ ತಮ್ಮ ಮಗಳ ಟೆನಿಸ್ ಅಕಾಡೆಮಿಯಿಂದ ಪಡೆಯುವ ಆದಾಯದಿಂದ ಬದುಕುತ್ತಿದ್ದಕ್ಕಾಗಿ ಅಪಹಾಸ್ಯ ಮಾಡಿದ್ದರು. ಇದರಿಂದ ದೀಪಕ್ ಯಾದವ್ ಮಗಳ ಮೇಲೆ ಕೋಪಗೊಂಡಿದ್ದರು. ಮಗಳಿಗೆ ಟೆನಿಸ್ ಅಕಾಡೆಮಿ ಮುಚ್ಚುವಂತೆ ಅನೇಕ ಬಾರಿ ಹೇಳಿದ್ದರು. ಆದರೆ, ಆಕೆ ಒಪ್ಪಿರಲಿಲ್ಲ. ಇದೇ ವಿಷಯದ ಜಗಳದಿಂದ ಗುಂಡು ಹಾರಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಪೊಲೀಸರ ಪ್ರಕಾರ, ತಂದೆ ತನ್ನ ಮಗಳ ವೃತ್ತಿಜೀವನ ಮತ್ತು ಗಳಿಕೆಯ ಬಗ್ಗೆ ಸಾಮಾಜಿಕ ಟೀಕೆಗಳಿಂದಾಗಿ ಕಳೆದ 15 ದಿನಗಳಿಂದ ಖಿನ್ನತೆಯಿಂದ ಬಳಲುತ್ತಿದ್ದೆ ಎಂದು ಹೇಳಿಕೊಂಡಿದ್ದಾರೆ. ತಂದೆ ಮತ್ತು ಮಗಳ ನಡುವಿನ ಇತ್ತೀಚಿನ ವಾಗ್ವಾದವು ರಾಧಿಕಾ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ವೀಡಿಯೊದಿಂದ ಹುಟ್ಟಿಕೊಂಡಿರಬಹುದು ಎಂದು ತನಿಖಾಧಿಕಾರಿಯೊಬ್ಬರು ಹೇಳಿದ್ದಾರೆ.

































