ನವದೆಹಲಿ: ಅಮೆರಿಕದಲ್ಲಿ ಸಿಖ್ ಪ್ರತ್ಯೇಕತಾವಾದಿ, ಖಲಿಸ್ತಾನ್ ಭಯೋತ್ಪಾದಕ ಗುರುಪತ್ ವಂತ್ ಸಿಂಗ್ ಪನ್ನು ಹತ್ಯೆ ಸಂಚಿನಲ್ಲಿ ಭಾರತದ ರಾ (Research & Analysis) ಮಾಜಿ ಅಧಿಕಾರಿ ವಿಕಾಸ್ ಯಾದವ್ ವಿರುದ್ಧ ಅಮೆರಿಕ ನ್ಯಾಯಾಂಗ ಇಲಾಖೆ ಆರೋಪಪಟ್ಟಿ ಸಲ್ಲಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಇಲಾಖೆ ಪ್ರಕಟನೆ ಬಿಡುಗಡೆ ಮಾಡಿದೆ. ಗುರುಪತ್ ವಂತ್ ಸಿಂಗ್ ನ್ಯೂಯಾರ್ಕ್ ನಿವಾಸಿಯಾಗಿದ್ದು, ಅಮೆರಿಕ ಮತ್ತು ಕೆನಡಾ ಪೌರತ್ವ ಹೊಂದಿದ್ದ. ಪನ್ನು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕ ಜಸ್ಟೀಸ್ ಡಿಪಾರ್ಟ್ ಮೆಂಟ್ ಗುರುವಾರ (ಅಕ್ಟೋಬರ್ 17) ವಿಕಾಸ್ ಯಾದವ್ ಗುರುತನ್ನು ಮೊದಲ ಬಾರಿಗೆ ಬಹಿರಂಗಗೊಳಿಸಿತ್ತು. ಅಷ್ಟೇ ಅಲ್ಲದೆ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಪ್ರವಾಸದಲ್ಲಿದ್ದಾಗಲೇ ಪನ್ನು ಹತ್ಯೆಗೆ ಸಂಚು ರೂಪಿಸಲಾಗಿತ್ತು ಎಂಬ ಆರೋಪವೂ ಇದೆ. ಪಿಟಿಐ ವರದಿ ಪ್ರಕಾರ, ಹರ್ಯಾಣ ಮೂಲದ ವಿಕಾಸ್ ಯಾದವ್ ಭಾರತದ ಪ್ರತಿಷ್ಠಿತ ಗುಪ್ತಚರ ಸಂಸ್ಥೆ Rawನಲ್ಲಿ ಕ್ಯಾಬಿನೆಟ್ ಸೆಕ್ರೆಟರಿಯೇಟ್ ನಲ್ಲಿ ಉದ್ಯೋಗಿಯಾಗಿದ್ದ. ಪ್ರಕರಣದ ತನಿಖೆ ನಡೆಸುತ್ತಿರುವ ಅಮೆರಿಕದ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (FBI) ಪನ್ನು ಹತ್ಯೆ ಪ್ರಕರಣದಲ್ಲಿ ಯಾದವ್ ವಿರುದ್ಧ ಆರೋಪಪಟ್ಟಿ ಸಲ್ಲಿಸಿರುವುದು ಹೆಚ್ಚಿನ ಚರ್ಚೆಗೆ ಎಡೆಮಾಡಿಕೊಟ್ಟಿದೆ. ವಿಕಾಸ್ ಯಾದವ್ 1984ರ ಡಿಸೆಂಬರ್ 11ರಂದು ಹರ್ಯಾಣದ ಪ್ರಾಣ್ ಪುರದಲ್ಲಿ ಜನಿಸಿದ್ದರು. ತಲೆಮರೆಸಿಕೊಂಡಿರುವ ಯಾದವ್ ಪತ್ತೆಗಾಗಿ ಎಫ್ ಬಿಐ ಆತನ ಪೋಸ್ಟರ್ ಅನ್ನು ಬಿಡುಗಡೆಗೊಳಿಸಿದೆ. ಗುಪ್ತಚರ ಸಂಸ್ಥೆ ರಾನಲ್ಲಿ ಸೆಕ್ಯುರಿಟಿ ಮ್ಯಾನೇಜ್ ಮೆಂಟ್ ಮತ್ತು ಇಂಟೆಲಿಜೆನ್ಸ್ ವಿಭಾಗದಲ್ಲಿ ಹಿರಿಯ ಫೀಲ್ಡ್ ಆಫೀಸರ್ ಆಗಿದ್ದ. ಅಲ್ಲದೇ ಈತ ಸಿಆರ್ ಪಿಎಫ್ ನಲ್ಲೂ ಕರ್ತವ್ಯ ನಿರ್ವಹಿಸಿದ್ದ ಎನ್ನಲಾಗಿದೆ. ಆದರೆ ಭಾರತ ಈ ಬಗ್ಗೆ ಖಚಿತಪಡಿಸಿಲ್ಲ ಎಂದು ಅಮೆರಿಕ ಹೇಳಿದೆ. ಚಾರ್ಜ್ ಶೀಟ್ ನಲ್ಲಿ ವಿಕಾಸ್ ಯಾದವ್ ಹೆಸರನ್ನು ಸಿಸಿ1 ಎಂದು ನಮೂದಿಸಲಾಗಿದೆ. ವಿಕಾಸ್ ಯಾದವ್ ಸಹಚರ ನಿಖಿಲ್ ಗುಪ್ತಾ ಅವರನ್ನು ಜೆಕ್ ರಿಪಬ್ಲಿಕ್ ನಲ್ಲಿ ಬಂಧಿಸಲಾಗಿತ್ತು. ನಂತರ ಅಮೆರಿಕಕ್ಕೆ ಹಸ್ತಾಂತರಿಸಲಾಗಿದ್ದು, ನಿಖಿಲ್ ಈಗ ಅಮೆರಿಕದ ಜೈಲಿನಲ್ಲಿದ್ದಾರೆ. ಕೊಲೆ ಸಂಚಿಗೆ ಸಂಬಂಧಿಸಿದಂತೆ ಯಾದವ್ ಮತ್ತು ಗುಪ್ತಾ ನಡುವೆ ನಡೆದ ಸಂವಹನದ ವಿವರವನ್ನು ಪ್ರಾಸಿಕ್ಯೂಷನ್ ನೀಡಿದೆ. ಗುರುಪತ್ ವಂತ್ ಸಿಂಗ್ ಪನ್ನು ಬಾಡಿಗೆ ಕೊಲೆ ಸಂಚಿನಲ್ಲಿ ಅಂಡರ್ ಕವರ್ ಫೆಡರಲ್ ಏಜೆಂಟ್ ವೊಬ್ಬರಿಗೆ ಯಾದವ್ ಮತ್ತು ಗುಪ್ತಾ 1,00,000 ಡಾಲರ್ ಗುತ್ತಿಗೆ ನೀಡಿರುವುದಾಗಿ ಪ್ರಾಸಿಕ್ಯೂಷನ್ ಆರೋಪಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ವರ್ಷ ಜೂನ್ ನಲ್ಲಿ ಅಮೆರಿಕಕ್ಕೆ ಭೇಟಿ ನೀಡುವ ಮುನ್ನ ದಿನ ಪನ್ನು ಕೊಲೆ ನಡೆಸಲು 15,000 ಡಾಲರ್ ಮುಂಗಡ ಹಣ ಪಾವತಿಸಲಾಗಿತ್ತು. ಅದೇ ದಿನ ಮತ್ತೊಬ್ಬ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ (45ವರ್ಷ)ನನ್ನು ಕೆನಡಾದ ವ್ಯಾಂಕೋವರ್ ಗುರುದ್ವಾರದ ಹೊರಭಾಗದಲ್ಲಿ ಗುಂಡಿಟ್ಟು ಹತ್ಯೆಗೈಯಲಾಗಿತ್ತು. ನಿಜ್ಜರ್ ಕೊಲೆಯಾದ ನಂತರ ಕೆನಡಾ ಪ್ರಧಾನಿ ಜಸ್ಟೀನ್ ಟ್ರ್ಯೂಡೊ ಈ ಘಟನೆಯಲ್ಲಿ ಭಾರತದ ಗುಪ್ತಚರ ಸಂಸ್ಥೆಯ ಏಜೆಂಟ್ ಗಳು ಶಾಮೀಲಾಗಿದ್ದಾರೆ ಎಂದು ಆರೋಪಿಸುವ ಮೂಲಕ ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧದಲ್ಲಿ ಬಿರುಕು ಬಿಟ್ಟಿತ್ತು. ಭಾರತ ಸರ್ಕಾರದ ನಿಲುವು ಏನು? ಈ ಬಗ್ಗೆ ಭಾರತ ಸರ್ಕಾರ ಎಫ್ಬಿಐಗೆ ಪ್ರತಿಕ್ರಿಯೆ ನೀಡಿದೆ. ಅಮೆರಿಕದ ನೆಲದಲ್ಲಿ ಯಾವುದೇ ಅಮೆರಿಕನ್ ಪ್ರಜೆಯನ್ನು ಕೊಲ್ಲುವ ಇಂತಹ ಯಾವುದೇ ಸಂಚಿನಲ್ಲಿ ಭಾರತ ಭಾಗಿಯಾಗಿಲ್ಲ ಎಂದು ಹೇಳುವು ಮೂಲಕ ಆರೋಪವನ್ನು ನಿರಾಕರಿಸಿದೆ. ಆದರೆ ಅಮೆರಿಕದ ಆರೋಪಗಳಿಂದಾಗಿ ಈ ಬಗ್ಗೆ ತನಿಖೆ ನಡೆಸಲು ಭಾರತದ ಕಡೆಯಿಂದ ತನಿಖಾ ಸಮಿತಿಯನ್ನು ರಚಿಸಲಾಗಿತ್ತು. ಇದಾದ ನಂತರ ಈ ವಿಚಾರದಲ್ಲಿ ಭಾರತದಿಂದ ದೊರೆತ ಸಹಕಾರದ ಬಗ್ಗೆ ಅಮೆರಿಕ ತೃಪ್ತಿ ವ್ಯಕ್ತಪಡಿಸಿದೆ.
