ಗ್ರೇಟರ್ ಬೆಂಗಳೂರು ವ್ಯಾಪ್ತಿಯ ಪಾಲಿಕೆಗಳ ಚುನಾವಣೆ ಸಹಿತ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆಗಳನ್ನು 2026 ಏಪ್ರಿಲ್ ಮೇ ಒಳಗಾಗಿ ನಡೆಸಲು ಗುರುವಾರ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.
ರಾಜ್ಯದ ಗ್ರಾಮ ಪಂಚಾಯ್ತಿ, ಪಂಚಾಯತ್ ರಾಜ್ ಸಂಸ್ಥೆಗಳು ಹಾಗೂ ನಗರ ಸ್ಥಳೀಯ ಸಂಸ್ಥೆಗಳನ್ನು ಒಳಗೊಂಡಂತೆ 6,500ಕ್ಕೂ ಅಧಿಕ ಸಂಸ್ಥೆಗಳ ಚುನಾವಣೆಗಳನ್ನು 2026ರ ಏಪ್ರಿಲ್ ಮೇ ನಲ್ಲಿ ನಡೆಸಲು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವಂತೆ ರಾಜ್ಯ ಸಚಿವ ಸಂಪುಟ ಗುರುವಾರ ಮಹತ್ವದ ತೀರ್ಮಾನ ಕೈಗೊಂಡಿದೆ.
ಕಳೆದ ನಾಲ್ಕು ವರ್ಷಗಳಿಂದ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗಳು ನಡೆಯದೇ ಬಾಕಿಯಿದ್ದರೆ, ಹಲವಾರು ನಗರ ಸ್ಥಳೀಯ ಸಂಸ್ಥೆಗಳ ಅವಧಿ ಮುಗಿದಿದೆ. ಅನೇಕ ಗ್ರಾಮ ಪಂಚಾಯಿತಿಗಳ ಅವಧಿಯೂ ಮುಗಿಯುತ್ತಿರುವ ಹಿನ್ನೆಲೆ, ಜಿ.ಪಂ–ತಾ.ಪಂ ಚುನಾವಣೆಗಳ ವಿಳಂಬ ಸಂಬಂಧಿಸಿದ ಪ್ರಕರಣ ನ್ಯಾಯಾಲಯದಲ್ಲಿದೆ. ನ್ಯಾಯಾಲಯವೂ ಸರ್ಕಾರಕ್ಕೆ ಬೇಗ ಚುನಾವಣಾ ಪ್ರಕ್ರಿಯೆ ಆರಂಭಿಸಲು ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ 30 ತಿಂಗಳು ಕಳೆದರೂ ಒಂದು ಸ್ಥಳೀಯ ಸಂಸ್ಥೆಯೂ ಚುನಾವಣೆ ನಡೆದಿಲ್ಲ ಎಂಬ ಟೀಕೆಯೊಂದಿಗೂ ಸಚಿವ ಸಂಪುಟ ಸ್ಪಂದಿಸಿದೆ. ಅನಗತ್ಯ ವಿಳಂಬ ತಪ್ಪಿಸಲು ವ್ಯಾಪ್ತಿ ಪುನರ್ ವಿಂಗಡಣೆ ಹಾಗೂ ಅಂತಿಮ ಮತದಾರರ ಪಟ್ಟಿಯ ಪರಿಷ್ಕರಣೆ ಶೀಘ್ರ ಪೂರ್ಣಗೊಳಿಸಿ, ಬಳಿಕ ಚುನಾವಣಾ ಅಧಿಸೂಚನೆ ಹೊರಡಿಸುವಂತೆ ಸಭೆಯಲ್ಲಿ ನಿರ್ಧರಿಸಲಾಗಿದೆ.
ರಾಜ್ಯದಲ್ಲಿ ಒಟ್ಟು 195 ನಗರ ಸ್ಥಳೀಯ ಸಂಸ್ಥೆಗಳು, 5,952 ಗ್ರಾಮ ಪಂಚಾಯಿತಿಗಳು, 31 ಜಿಲ್ಲಾ ಪಂಚಾಯಿತಿಗಳು, 239 ತಾಲೂಕು ಪಂಚಾಯಿತಿಗಳು ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಐದು ಹೊಸ ನಗರ ನಿಗಮಗಳ ಚುನಾವಣೆಗಳು ಬಾಕಿ ಇವೆ. ಈ ಐದು ನಿಗಮಗಳನ್ನು ಹೊರತುಪಡಿಸಿ ಉಳಿದ ಎಲ್ಲ ಸಂಸ್ಥೆಗಳ ಚುನಾವಣೆಗೆ ತಕ್ಷಣ ಸಿದ್ಧತೆ ಆರಂಭಿಸಲು ಸಚಿವ ಸಂಪುಟ ಸೂಚನೆ ನೀಡಿದೆ.

































