ಚಿತ್ರದುರ್ಗ : ಚಿತ್ರದುರ್ಗ ನಗರದಲ್ಲಿ ಮಾಜಿ ಮುಖ್ಯಮಂತ್ರಿ ದಿ: ಎಸ್.ನಿಜಲಿಂಗಪ್ಪನವರು ವಾಸವಿದ್ದ ಮನೆ ‘ವಿನಯ’ ಕಟ್ಟಡಕ್ಕೆ ರೂ.1.20 ಕೋಟಿ ವೆಚ್ಚದಲ್ಲಿ ಮೂಲರೂಪಕ್ಕೆ ಧಕ್ಕೆ ಬಾರದ ರೀತಿ ನವೀಕರಿಸಲು ಪಾರಂಪರಿಕ ಸ್ಪರ್ಶ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹೇಳಿದರು.
ಮಂಗಳವಾರ ಕಾಮಗಾರಿ ಪ್ರಗತಿಯನ್ನು ವೀಕ್ಷಿಸಿದ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.
ಎಸ್. ನಿಜಲಿಂಗಪ್ಪನವರು ವಾಸವಿದ್ದ ಮನೆಯನ್ನು ಸರ್ಕಾರದಿಂದ ಈಗಾಗಲೇ ಖರೀದಿಸಲಾಗಿದೆ. ಕಟ್ಟದ ನವೀಕರಣ ಕಾರ್ಯ ಪೂರ್ಣಗೊಳಿಸಿ ಸಾರ್ವಜನಿಕರ ಪ್ರದರ್ಶನಕ್ಕೆ ಅನುಕೂಲ ಮಾಡಿಕೊಡಲಾಗುವುದು. ಈ ವಿಚಾರಕ್ಕೆ ನಿಜಲಿಂಗಪ್ಪನವರ ವಂಶಸ್ಥರು ಸಹ ಸಹಕಾರ ನೀಡಿದ್ದಾರೆ. ಮನೆ ಪಾರಂಪರಿಕ ಕಟ್ಟಡವಾಗಿದ್ದು, ಮೂಲ ರೂಪದಲ್ಲಿ ಯಾವುದೇ ಬದಲಾವಣೆ ಮಾಡದೆ ನವೀಕರಣ ಕಾರ್ಯ ಕೈಗೊಳ್ಳಲಾಗುತ್ತಿದೆ. ಯೋಜನೆಗೆ ರಾಜ್ಯ ಪುರಾತತ್ವ ಇಲಾಖೆ ಸಹಕಾರ ಹಾಗೂ ತಾಂತ್ರಿಕ ಸಲಹೆ ಪಡೆಯಲಾಗಿದೆ. ನಿರ್ಮಿತಿ ಕೇಂದ್ರದಿಂದ ರೂ.1.20 ಕೋಟಿ ವೆಚ್ಚದ ವಿಸ್ತ್ರತ ಯೋಜನಾ ವರದಿಯನ್ನು ಸಿದ್ದಪಡಿಸಲಾಗಿದೆ. ಈಗಾಗಲೇ ಕಾಮಗಾರಿ ಪ್ರಾರಂಭವಾಗಿದ್ದು, ಕಟ್ಟಡದ ರಿಪ್ಲಾಸ್ಟರಿಂಗ್, ಫ್ಲೋರಿಂಗ್, ವಿದ್ಯುತ್ ಕಾಮಗಾರಿಗಳನ್ನು ನಡೆಸಲಾಗುವುದು.
ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವರಾದ ಶಿವರಾಜ್ ತಂಗಡಗಿಯವರು ಇತ್ತೀಚೆಗೆ ಭೇಟಿ ನೀಡಿದ ಸಂದರ್ಭದಲ್ಲಿ, ಕಟ್ಟಡ ನವೀಕರಣಗೊಳಿಸಲು ಸಲಹೆ ಸೂಚನೆ ನೀಡಿದ್ದು, ಅಗತ್ಯವಿದ್ದಲ್ಲಿ ಹೆಚ್ಚುವರಿ ಅನುದಾನ ನೀಡುವ ಭರವಸೆ ನೀಡಿದ್ದಾರೆ. ಈಗಾಗಲೇ ರೂ.84 ಲಕ್ಷ ಅನುದಾನ ಬಿಡುಗಡೆಯಾಗಿದೆ. ವರದಿ ಪರಿಶೀಲಿಸಿ, ಪತ್ರ ಬರೆದು ಹೆಚ್ಚುವರಿ ಅನುದಾನಕ್ಕೆ ಕೋರಿಕೆ ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದರು.
ಮೂಲ ಕಟ್ಟಡವನ್ನು ಸುಣ್ಣ, ಬೆಲ್ಲ, ಅಲೋವೆರ ಮಿಶ್ರಣದಿಂದ ತಯಾರಿಸಿದ ಗಾರೆ ಹಾಗೂ ಮಣ್ಣನ್ನು ಬಳಸಿ ನಿರ್ಮಿಸಲಾಗಿದೆ. ಇದೇ ಮಾದರಿಯಲ್ಲಿ ಕಟ್ಟಡವನ್ನು ಪುನರ್ ನಿರ್ಮಾಣ ಮಾಡಲು ಹೆಚ್ಚಿನ ಸಮಯ ಬೇಕಾಗುತ್ತದೆ. ಈ ಕುರಿತು ಪುರಾತತ್ವ ಇಲಾಖೆ ಹಾಗೂ ನಿರ್ಮಿತಿ ಕೇಂದ್ರದವರು ಚರ್ಚಿಸಿ ತೀರ್ಮಾನ ಕೈಗೊಳ್ಳಲಿದ್ದಾರೆ. ಇದಕ್ಕಾಗಿ ನಿಜಲಿಂಗಪ್ಪನವರ ಪುತ್ರ ಒಳಗೊಂಡಂತೆ ಸಮಿತಿ ಸಹ ರಚಿಸಲಾಗಿದೆ. ಮೂಲ ವಿನ್ಯಾಸಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಪಾರಂಪರಿಕವಾಗಿಯೇ ಕಟ್ಟಡ ಕಾಣುವಂತೆ ಕಾಮಗಾರಿ ಕೈಗೊಳ್ಳಬೇಕಾಗಿರುವುದರಿಂದ ಹೆಚ್ಚಿನ ಸಮಯ ಬೇಕಾಗುತ್ತದೆ. 5 ರಿಂದ 6 ತಿಂಗಳಿನಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ನಿರ್ದೇಶನ ನೀಡಿರುವುದಾಗಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ವಿವರ ನೀಡಿದರು.
ಈ ವೇಳೆ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಹರೀಶ್ ಕುಮಾರ್, ಸಹಾಯಕ ಇಂಜಿನಿಯರ್ ರವಿ ಮುಂತಾದವರು ಉಪಸ್ಥಿತರಿದ್ದರು.































