ಬೆಂಗಳೂರು: ಡಿ.31ರಂದು ನಡೆಯಬೇಕಿದ್ದ ಅನಿರ್ದಿಷ್ಟಾವಧಿ `ಸಾರಿಗೆ’ ಮುಷ್ಕರಕ್ಕೆ ಕೊನೆಗೂ ಸರ್ಕಾರ `ಸೊಪ್ಪು’ ಹಾಕಿದೆ. ಸಕ್ರಾಂತಿ ಬಳಿಕ ಚರ್ಚಿಸಿ ಸಾರಿಗೆ ನೌಕರರ ಬೇಡಿಕೆ ಈಡೇರಿಸುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದರಿಂದ ಮುಷ್ಕರ ಮುಂದೂಡಿಕೆಯಾಗಿದೆ.
ಮಂಗಳವಾರ ನಡೆಯಬೇಕಿದ್ದ ಅನಿರ್ದಿಷ್ಟಾವಧಿ ಸಾರಿಗೆ ಮುಷ್ಕರವನ್ನು ಮುಂದೂಡಿರುವುದಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಜಂಟಿ ಕ್ರಿಯಾ ಸಮಿತಿಯಿಂದ ಆದೇಶ ಪ್ರಕಟಿಸಿದೆ. ಮುಷ್ಕರಕ್ಕೆ ಬೆಂಬಲ ನೀಡಿದ್ದ ಸಂಘಟನೆಗಳೊಂದಿಗೆ ಸಭೆ ನಡೆಸಿದ ಬಳಿಕ ಆದೇಶ ಪ್ರಕಟಿಸಲಾಗಿದೆ. ಸಭೆಗೂ ಮುನ್ನ ವೇತನ ಪರಿಷ್ಕರಣೆಗೆ ಸಿಎಂ 2,000 ಕೋಟಿ ರೂ. ಅನುದಾನ ಬಿಡುಗಡೆ ಮಾಡಿರುವುದಾಗಿ ಹೇಳಿದ್ದರು.
ಇತ್ತೀಚೆಗೆ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ನೇತೃತ್ವದಲ್ಲಿ ಸಾರಿಗೆ ಇಲಾಖೆಗಳ ಸ್ಥಿತಿಗತಿ ಕುರಿತು ಸಭೆ ನಡೆದಿತ್ತು. ಈ ಸಭೆಯಲ್ಲಿ ಸಾರಿಗೆ ಇಲಾಖೆಗೆ 3,650 ಕೋಟಿ ರೂ. ಹೊರೆಯಾಗುತ್ತಿದೆ ಎಂದು ಸಾರಿಗೆ ಅಧಿಕಾರಿಗಳು ಅಳಲು ತೋಡಿಕೊಂಡಿದ್ದರು. ನಷ್ಟ ಪರಿಹಾರಕ್ಕೆ ಶೇ.15ರಷ್ಟು ಪ್ರಯಾಣದರ ಹೆಚ್ಚಳಕ್ಕೆ ಸಭೆಯಲ್ಲಿ ಚರ್ಚೆ ನಡೆಸಲಾಗಿತ್ತು. ಅದರಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ತೀರ್ಮಾನ ಮಾಡಲಾಗಿತ್ತು. ಆದರೆ 15% ಪ್ರಮಾಣದಲ್ಲಿ ದರ ಪರಿಷ್ಕರಣೆಯಾದರೂ ನಿಗಮಗಳು ಇನ್ನೂ 1,800 ಕೋಟಿ ನಷ್ಟ ಅನುಭವಿಸುತ್ತವೆ ಎಂಬ ಮಾಹಿತಿ ಅಧಿಕಾರಿಗಳು ನೀಡಿದ್ದರು
ರಾಜ್ಯದಲ್ಲಿರುವ ಬಸ್‌ಗಳೆಷ್ಟು?
* ರಾಜ್ಯದ ಸಾರಿಗೆ ಇಲಾಖೆಯಲ್ಲಿರೋ ಒಟ್ಟು ಬಸ್‌ಗಳ ಸಂಖ್ಯೆ -24,000
* ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಖ್ಯೆ- 8,116
* ಬಿಎಂಟಿಸಿ ಬಸ್ ಗಳ ಸಂಖ್ಯೆ-6,688
* ವಾಯುವ್ಯ ಕರ್ನಾಟಕ ಬಸ್ ಗಳ ಸಂಖ್ಯೆ- 4,858
* ಕಲ್ಯಾಣ ಕರ್ನಾಟಕ ಬಸ್ ಗಳ ಸಂಖ್ಯೆ-4,327
ಬಂದ್‌ಗೆ ಬೆಂಬಲಿಸದ್ದ ಸಂಘಟನೆಗಳು
* ಕೆಎಸ್‌ಆರ್‌ಟಿಸಿ ಸ್ಟಾಫ್ ಆಂಡ್ ವರ್ಕಸ್ ಫೆಡರೇಶನ್
* ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾಮಂಡಳ
* ರಾಜ್ಯ ಸಿಐಟಿಯು
* ಬಿಎಂಎಸ್
* ಪರಿಶಿಷ್ಟ ನೌಕರರ ಸಂಘ
* ಸಾರಿಗೆ ನೌಕರರ ಕ್ಷೇಮಾಭಿವೃದ್ಧಿ ಸಂಘ
* ರಾಜ್ಯ ಸಾರಿಗೆ ಸಂಸ್ಥೆ ನೌಕರರ ಸಂಘ
* ಅಖಂಡ ಕರ್ನಾಟಕ ರಾಜ್ಯ ಸಾರಿಗೆ ಕಾರ್ಮಿಕ ಮಹಾಮಂಡಳಿ
* ರಾಜ್ಯ ರಸ್ತೆ ಸಾರಿಗೆ ನೌಕಕರ ಕೂಟ
* ಕೆಬಿಎನ್‌ಎನ್ ವರ್ಕರ್ಸ್ ಫೆಡರೇಷನ್
* ಕೆಎಸ್‌ಆರ್‌ಟಿಸಿ ನಿಗಮಗಳ ಎಸ್‌ಸಿ-ಎಸ್‌ಟಿ ನೌಕಕರ ಕ್ಷೇಮಾಭಿವೃದ್ಧಿ ಸಂಘ
* ಕರಾರಸಾಸಂಸ್ಥೆ ಎಸ್ಸಿ,ಎಸ್‌ಟಿ ಅಧಿಕಾರಿಗಳ ಮತ್ತು ನೌಕರರ ಸಮನ್ವಯ ಸಮಿತಿ
* ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ವಿಕಲಚೇತನ ನೌಕರರ ಸಂಘ
ಸಾರಿಗೆ ನೌಕರರ ಬೇಡಿಕೆಗಳೇನು?
* 01-01-2020ರಿಂದ ಆಗಿರುವ ಶೇ.15ರಷ್ಟು ವೇತನ ಹೆಚ್ಚಳದ ನಂತರದ 38 ತಿಂಗಳ ಬಾಕಿ ಹಣವನ್ನು ವಿಳಂಬವಿಲ್ಲದೆ ಪಾವತಿಸಬೇಕು
* ಸದ್ಯ ನೌಕರರು ಪಡೆಯುತ್ತಿರುವ ವಿವಿಧ ಭತ್ಯೆಗಳನ್ನು ಐದು ಪಟ್ಟು ಹೆಚ್ಚಳ ಮಾಡಬೇಕು
* ಎಲ್ಲಾ ನೌಕರರಿಗೂ ಪ್ರತೀ ತಿಂಗಳೂ ಹೊರ ರೋಗಿ ಚಿಕಿತ್ಸೆ ವೆಚ್ಚಕ್ಕಾಗಿ 2 ಸಾವಿರ ರೂಪಾಯಿ ಜೊತೆಗೆ ಉಚಿತ ಔಷಧಿ ನೀಡಬೇಕು
* ಇಎಸ್‌ಐ ಮಾದರಿಯಲ್ಲಿ ನೌಕರರ ಮೂಲ ವೇತನದ ಶೇ.4.5 ಹಾಗೂ ನೌಕರರಿಂದ ಶೇ.0.5 ವಂತಿಗೆ ಸಂಗ್ರಹಿಸಿ ಟ್ರಸ್ಟ್ ರಚಿಸಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಕೊಡುವ ಯೋಜನೆ ರೂಪಿಸಬೇಕು
* ನಿವೃತ್ತ ನೌಕರರು ಮತ್ತು ಅವರ ಪತಿ/ಪತ್ನಿ ಹಾಗೂ ಮಕ್ಕಳಿಗೂ ಆರೋಗ್ಯ ಯೋಜನೆ ನೀಡಬೇಕು
* ನಗದು ರಹಿತ ಆರೋಗ್ಯ ಚಿಕಿತ್ಸೆ ಯೋಜನೆಯನ್ನು ಏಕಕಾಲದಲ್ಲಿ 4 ನಿಗಮಗಳಲ್ಲಿ ಜಾರಿಗೆ ತರಬೇಕು
* ವಿದ್ಯುತ್ ಚಾಲಿತ ಬಸ್ಸುಗಳ ನಿರ್ವಹಣೆಯನ್ನು ಖಾಸಗಿ ಗುತ್ತಿಗೆದಾರರಿಗೆ ನೀಡುವ ಪದ್ಧತಿಯನ್ನು ಕೈಬಿಡಬೇಕು
* ಸಂಸ್ಥೆಯ ನೌಕರರು ಮತ್ತು ಸಿಬ್ಬಂದಿಯೇ ವಿದ್ಯುಚ್ಚಾಲಿತ ಬಸ್ಸುಗಳ ನಿರ್ವಹಣೆ ಮಾಡಬೇಕು
* ಹೊರ ಗುತ್ತಿಗೆ ಆಧಾರದ ಮೇಲೆ ಚಾಲಕ, ತಾಂತ್ರಿಕ ಮತ್ತು ಭದ್ರತಾ ಸಿಬ್ಬಂದಿ ನೇಮಕಾತಿಯನ್ನು ಕೈಬಿಡಬೇಕು