ದಾವಣಗೆರೆ : ಹೊನ್ನಾಳಿಯಲ್ಲಿ ಫೈನಾನ್ಸ್ ಕಂಪನಿ ಕಿರುಕುಳದಿಂದ ಸರ್ಕಾರಿ ಶಾಲೆಯ ಶಿಕ್ಷಕಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತಿವಾಗಿದೆ. ರಟ್ಟಿಹಳ್ಳಿ ತಾಲ್ಲೂಕಿನ ತಿಮ್ಮನಕಟ್ಟೆ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕಿ ಪುಷ್ಪ ಲತಾ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬ ವರ್ಗ ಶಂಕೆ ವ್ಯಕ್ತಪಡಿಸಿದೆ.
ಪುಷ್ಪ ಲತಾ ಅವರು ಭಾನುವಾರ ರಾತ್ರಿಯಿಂದ ಕಾಣೆಯಾಗಿದ್ದು, ಹೊನ್ನಾಳಿ ಪಟ್ಟಣದ ರಾಘವೇಂದ್ರ ಸ್ವಾಮಿ ಮಠದ ಸಮೀಪದ ತುಂಗಭದ್ರಾ ನದಿಯ ದಡದಲ್ಲಿ ಅವರ ತಪ್ಪಲಿ ದೊರೆತಿದೆ.ಇದರಿಂದ ಪುಷ್ಪ ಲತಾ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಅಗ್ನಿಶಾಮಕ ದಳ ಸಿಬ್ಬಂದಿ, ಮುಳುಗು ತಜ್ಞರು ಸೋಮವಾರ ಬೆಳಗ್ಗೆಯಿಂದಲೇ ಕಾರ್ಯಾಚರಣೆ ಪ್ರಾರಂಭಿಸಿದ್ದಾರೆ.
ಪುಷ್ಪಲತಾ ಅವರ ಪತಿ ಹಾಲೇಶ್ ಅನುದಾನಿತ ಶಾಲೆಯ ಶಿಕ್ಷಕ. ಈ ದಂಪತಿ ಮನೆ ಕಟ್ಟಲು ಸುಮಾರು 30 ಲಕ್ಷಕ್ಕೂ ಹೆಚ್ಚು ಹಣ ಫೈನಾನ್ಸ್ ಕಂಪನಿಯಲ್ಲಿ ಸಾಲ ಮಾಡಿದ್ದರು.
ಸಾಲ ಮರುಪಾವತಿ ಮಾಡದ್ದರಿಂದ ಫೈನಾನ್ಸ್ ಕಂಪನಿ ದಂಪತಿಗೆ ನೋಟೀಸ್ ನೀಡಿದ್ದರು. ಅಷ್ಟೇ ಅಲ್ಲದೆ ಸಾಲ ಮರುಪಾವತಿ ಮಾಡುವಂತೆ ಮನೆಗೆ ತೆರೆಳಿದ್ದ ವೇಳೆ ದಂಪತಿ ಹಲ್ಲೆ ನಡೆಸಿದ್ದರು ಎಂದು ಫೈನಾನ್ಸ್ ಕಂಪನಿ ಪೊಲೀಸರಿಗೆ ದೂರು ನೀಡಿತ್ತು. ನಂತರ ಪೊಲೀಸರು ಎರಡು ಕಡೆಯವರನ್ನು ಕರೆಸಿ, ವಿಚಾರಣೆ ನಡೆಸಿದ ನಂತರ ಫೈನಾನ್ಸ್ ಕಂಪನಿ ದೂರು ವಾಪಸ್ಸು ಪಡೆದಿತ್ತು.