ಅಮಿತಾಭ್ ಬಚ್ಚನ್ ಮಗಳು ಶ್ವೇತಾ ಬಚ್ಚನ್ ಪತಿ ನಿಖಿಲ್ ನಂದಾ ಸೇರಿ ಒಟ್ಟು 8 ಮಂದಿ ವಿರುದ್ಧ ಉತ್ತರ ಪ್ರದೇಶದ ಬದೌನ್ ಜಿಲ್ಲೆಯ ದತಗಂಜ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ನ್ಯಾಯಾಲಯದ ಆದೇಶದ ಮೇರೆಗೆ ಇವರ ವಿರುದ್ಧ ಕೇಸ್ ದಾಖಲಾಗಿದೆ ಎಂದು ವರದಿಯಾಗಿದೆ. ಅಂದಹಾಗೇ, ಎಸ್ಕಾರ್ಟ್ ಕುಬೋಟಾ ಲಿಮಿಟೆಡ್ ಸಿಇಒ ಆಗಿರುವ ನಿಖಿಲ್ ನಂದಾ ಸೇರಿ 8 ಮಂದಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎಂಬ ಆರೋಪದಡಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪಾಪಡ್ ಹಮ್ಜಾಪುರೆ ಗ್ರಾಮದ ನಿವಾಸಿ ಜ್ಞಾನೇಂದ್ರ ಎಂಬುವರು ನಿಖಿಲ್ ನಂದಾ ಮತ್ತು ಇತರರ ವಿರುದ್ಧ ಕೋರ್ಟ್‌ಗೆ ದೂರು ಸಲ್ಲಿಸಿದ್ದಾರೆ. ನನ್ನ ಸಹೋದರ ಜಿತೇಂದ್ರ ಅವರು ದತ್ತಗಂಜ್‌ನಲ್ಲಿ ಜೈ ಕಿಸಾನ್ ಟ್ರೇಡರ್ಸ್ ಎಂಬುವ ಟ್ರ್ಯಾಕ್ಟರ್ ಏಜೆನ್ಸಿ ನಡೆಸುತ್ತಿದ್ದರು. Escorts Kubota Limited ಕಂಪನಿಯ ಸ್ಥಳೀಯ ಮ್ಯಾನೇಜರ್ ಆಗಿರುವ ಆಶಿಶ್ ಬಲಿಯಾನ್, ಸೇಲ್ಸ್ ಮ್ಯಾನೇಜರ್ ಸುಮಿತ್ ರಾಘವ್, ಉತ್ತರ ಪ್ರದೇಶ ಬ್ರ್ಯಾಂಚ್ ಮುಖ್ಯಸ್ಥ ದಿನೇಶ್ ಪಂತ್, ಫೈನಾನ್ಸಿಯರ್ ಕಲೆಕ್ಷನ್ ಆಫೀಸರ್ ಪಂಕಜ್ ಭಾಸ್ಕರ್, ಸೇಲ್ಸ್ ಮ್ಯಾನೇಜರ್ ಅಮಿತ್ ಪಂತ್, ಸೇಲ್ಸ್ ಹೆಡ್ ನೀರಜ್ ಮೆಹ್ರಾ, ಸಿಇಒ ನಿಖಿಲ್ ನಂದಾ ಮತ್ತು ಶಹಜಹಾನ್‌ಪುರ ಡೀಲರ್ ಶಿಶಾಂತ್ ಗುಪ್ತಾ ಅವರು ನನ್ನ ಸಹೋದರನ ಏಜೆನ್ಸಿಗೆ ಆಗಮಿಸಿ, ತಮ್ಮ ಕಂಪನಿಯ ಟ್ರ್ಯಾಕ್ಟರ್‌ಗಳ ಮಾರಾಟವನ್ನ ಹೆಚ್ಚಿಸುವಂತೆ ಒಂದೇ ಸಮನೆ ಒತ್ತಡ ಹೇರಿದ್ದಾರೆ. ಹಾಗೊಮ್ಮೆ ಹೆಚ್ಚಿಸದೆ ಇದ್ದಲ್ಲಿ, ಏಜೆನ್ಸಿ ಮುಚ್ಚಿಸುವುದಾಗಿಯೂ ಬೆದರಿಕೆ ಒಡ್ಡಿದ್ದರು. ಇವರು ನೀಡುವ ಮಾನಸಿಕ ಹಿಂಸೆ ತಾಳಲಾರದೆ ನನ್ನ ಸಹೋದರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ದಾಖಲಿಸಿದ್ದಾರೆ. ಇದರ ಅನ್ವಯ ಈ ಮೇಲಿನವರ ಎಲ್ಲರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
