ಬೆಂಗಳೂರು : ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿರುವ ಆರೋಪದಡಿ ಸ್ಯಾಂಡಲ್ವುಡ್ ಪೋಷಕ ನಟಿ ಶಶಿಕಲಾ ವಿರುದ್ಧ ಪ್ರಕರಣ ದಾಖಲಾಗಿದೆ. ಶಶಿಕಲಾ ವಿರುದ್ಧ ನಿರ್ದೇಶಕ ಹರ್ಷವರ್ಧನ್ ಟಿ.ಜಿ ನೀಡಿರುವ ದೂರಿನನ್ವಯ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
2020ರಲ್ಲಿ ಪ್ರಜಾರಾಜ್ಯ ಹೆಸರಿನ ಸಿನಿಮಾ ನಿರ್ದೇಶನ ಮಾಡಿದ್ದ ಹರ್ಷವರ್ಧನ್ಗೆ ಶಶಿಕಲಾರ ಪರಿಚಯವಾಗಿತ್ತು. ಆ ಸಂದರ್ಭದಲ್ಲಿ ಹರ್ಷವರ್ಧನ್ರ ಫೋನ್ ನಂಬರ್ ಪಡೆದುಕೊಂಡಿದ್ದ ಶಶಿಕಲಾ, ‘ತನ್ನೊಂದಿಗೆ ರಿಲೇಶನ್ಶಿಪ್ ಹೊಂದಿದರೆ ತಾವೂ ಸಹ ಸಿನಿಮಾದಲ್ಲಿ ಹಣ ಹೂಡಿಕೆ ಮಾಡುವುದಾಗಿ’ ನಂಬಿಸಿದ್ದರು. ಅದಕ್ಕೆ ಒಪ್ಪಿದ್ದ ಹರ್ಷವರ್ಧನ್, ‘ತಾವು ಕೇವಲ ರಿಲೇಶನ್ಶಿಪ್ನಲ್ಲಿ ಇರುವುದಾಗಿ, ಮದುವೆಯಾಗುವುದಿಲ್ಲ’ ಎಂದು ಹೇಳಿದ್ದರು ಎನ್ನಲಾಗಿದೆ.
ನಂತರ ತಮ್ಮನ್ನ ಮದುವೆಯಾಗುವಂತೆ ದುಂಬಾಲು ಬಿದ್ದಿದ್ದ ಶಶಿಕಲಾ, ರಿಲೇಶನ್ಶಿಪ್ನಲ್ಲಿದ್ದಾಗಿನ ತಮ್ಮಿಬ್ಬರ ನಡುವಿನ ಕಾಲ್ ರೆಕಾರ್ಡ್ಸ್ ಇಟ್ಟು ಬೆದರಿಸಿದ್ದರು. ಹರ್ಷವರ್ಧನ್ ಒಪ್ಪದಿದ್ದಾಗ ನಾಗರಭಾವಿಯಲ್ಲಿರುವ ಅವರ ಕಚೇರಿಗೆ ಬಂದು ಖಾರದ ಪುಡಿ ಎರಚಿ ಹಲ್ಲೆ ಮಾಡಿದ್ದರು. ಆ ಸಂದರ್ಭದಲ್ಲಿ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯ ಹರ್ಷವರ್ಧನ್ ದೂರು ನೀಡಿದ್ದರು. ಬಳಿಕ ಇಬ್ಬರಿಗೂ ಪೊಲೀಸರು ಬುದ್ದಿವಾದ ಹೇಳಿ ಕಳಿಸಿದ್ದರು. ಆದರೆ 2022ರಲ್ಲಿ ಶಶಿಕಲಾ ನೀಡಿದ್ದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿದ್ದ ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ಹರ್ಷವರ್ಧನ್ ಅವರನ್ನ ಬಂಧಿಸಿದ್ದರು.
ಜೈಲಿನಿಂದ ಹೊರ ಬಂದ ಬಳಿಕವೂ ಹರ್ಷವರ್ಧನ್ ಅವರಿಗೆ ಸಿನಿಮಾ ನಿರ್ದೇಶನ ಮಾಡಲು ಬಿಡುವುದಿಲ್ಲ ಎಂದು ಶಶಿಕಲಾ ಬೆದರಿಸಿದ್ದರು. ಆ ಸಂದರ್ಭದಲ್ಲಿ “ಸುಮ್ಮನೆ ಸಿನಿಮಾ ಕರಿಯರ್ ಹಾಳಾಗುವುದು ಬೇಡ, ಆಕೆಯನ್ನ ಮದುವೆಯಾಗು” ಎಂದು ನಿರ್ಮಾಪಕರು ನೀಡಿದ್ದ ಸಲಹೆಯನ್ವಯ 2022ರ ಮಾರ್ಚ್ನಲ್ಲಿ ಶಶಿಕಲಾ ಅವರನ್ನ ಹರ್ಷವರ್ಧನ್ ಮದುವೆಯಾಗಿದ್ದರು. ಮದುವೆಯಾದ ಕೆಲ ದಿನಗಳ ನಂತರ ನಿರ್ಮಾಪಕರು, ನಿರ್ದೇಶಕ, ಕಲಾವಿದರು ಮನೆಗೆ ಬಂದು ಹೋಗಲಾರಂಭಿಸಿದ್ದರು. ತಾವು ಪ್ರಶ್ನಿಸಿದಾಗ ತಮ್ಮನ್ನ ಮನೆಯಿಂದ ಹೊರಹಾಕುತ್ತಿದ್ದರು. ಒಂದೆರಡು ಗಂಟೆಗಳ ಬಳಿಕ ತಾವೇ ಮನೆಯೊಳಗೆ ಸೇರಿಸುತ್ತಿದ್ದರು. ಈ ನಡುವೆ ಅಮ್ಮನ ಮಡಿಲು ಹೆಸರಿನಲ್ಲಿ ಶಶಿಕಲಾ ಅನಾಥಾಶ್ರಮ ಆರಂಭಿಸಿದ್ದರು.
ಯಾಕೆ ಎಂದು ಪ್ರಶ್ನಿಸಿದಾಗ, ಕಪ್ಪುಹಣವನ್ನ ಬದಲಾಯಿಸುವ ಅವಕಾಶ ಸಿಗುತ್ತದೆ ಎಂದು ಶಶಿಕಲಾ ಆಮಿಷವೊಡ್ಡಿದ್ದರು. 2024ರ ಆಗಸ್ಟ್ನಲ್ಲಿ ತಮ್ಮನ್ನ ಮನೆಯಿಂದ ಹೊರ ಹಾಕಿರುವ ಶಶಿಕಲಾ, ಯೂಟ್ಯೂಬ್ ಚಾನೆಲ್ವೊಂದರ ಸಿಬ್ಬಂದಿಯೊಂದಿಗೆ ಸೇರಿ ತನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ.ತಾವೂ ಸಹ ನನ್ನೊಂದಿಗೆ ಬದುಕುತ್ತಿಲ್ಲ, ನನಗೂ ನೆಮ್ಮದಿಯಾಗಿರಲು ಬಿಡುತ್ತಿಲ್ಲ ಎಂದು ಹರ್ಷವರ್ಧನ್ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಹರ್ಷವರ್ಧನ್ ನೀಡಿರುವ ದೂರಿನನ್ವಯ ಶಶಿಕಲಾ ಸೇರಿದಂತೆ ಇಬ್ಬರ ವಿರುದ್ಧ ವಿದ್ಯಾರಣ್ಯಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.