ಅಕ್ರಮ ಆಸ್ತಿ ಗಳಿಕೆ ಆರೋಪಕ್ಕೆ ಸಂಬಂಧಿಸಿ ಮಾಜಿ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಪುತ್ರ ಹಾಗೂ ಸೊಸೆ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈಶ್ವರಪ್ಪ ಪುತ್ರ ಕಾಂತೇಶ್ ಹಾಗೂ ಸೊಸೆ ಶಾಲಿನಿ ವಿರುದ್ಧವೂ ಭ್ರಷ್ಟಚಾರ ಕಾಯ್ದೆಯಡಿ ಕೇಸ್ ಆಗಿದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಆದೇಶದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. ಈಶ್ವರಪ್ಪ ಹಾಗೂ ಕುಟುಂಬದ ವಿರುದ್ಧ ನ್ಯಾಯಾಲಯದಲ್ಲಿ ವಿನೋದ್ ಎಂಬವರು ಖಾಸಗಿ ದೂರು ದಾಖಲಿಸಿದ್ದರು. ಕೋರ್ಟ್ ಸೂಚನೆ ಬಳಿಕ ಲೋಕಾಯುಕ್ತ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ವಿಚಾರಣೆಗಾಗಿ ಲೋಕಾಯುಕ್ತದ ಮುಂದೆ ಹಾಜರಾಗುವಂತೆ ಡಿಸಿಎಂ ಕೆ.ಎಸ್.ಈಶ್ವರಪ್ಪ ಹಾಗೂ ಕುಟುಂಬಸ್ಥರಿಗೆ ನೋಟಿಸ್ ನೀಡಲಾಗಿದೆ. ಇನ್ನು ದೂರು ನೀಡಿದ್ದ ವಕೀಲ ವಿನೋದ್‌ಗೆ ದಾಖಲಾತಿ ಸಲ್ಲಿಸಲು ನೋಟಿಸ್ ಕೊಡಲಾಗಿದೆ.
ಏನಿದು ಪ್ರಕರಣ
ಕೆ.ಎಸ್. ಈಶ್ವರಪ್ಪ ಅವರು ಜಲಸಂಪನ್ಮೂಲ ಸಚಿವರಾಗಿದ್ದ ವೇಳೆ ಆದಾಯ ಮೀರಿ ಅಕ್ರಮ ಆಸ್ತಿ ಗಳಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಸಂಬಂಧ ಭ್ರಷ್ಟಾಚಾರ ನಿಗ್ರಹ ಕಾಯ್ದೆ 1988ರ ಕಲಂ 13(1)(ಡಿ) ಹಾಗೂ 13(1)(ಇ) ಮತ್ತು ಭಾರತೀಯ ದಂಡ ಸಂಹಿತೆ 1860ರ ಕಲಂ 420ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ದೂರುದಾರ ಬಿ. ವಿನೋದ್ ಅವರು ಸಲ್ಲಿಸಿದ್ದ ಖಾಸಗಿ ದೂರನ್ನು ಲೋಕಾಯುಕ್ತ ಕೋರ್ಟ್ ವಜಾಗೊಳಿಸಿತ್ತು. ವಜಾ ಆದೇಶವನ್ನು ಪ್ರಶ್ನಿಸಿ ವಿನೋಧ್ ಹೈಕೋರ್ಟ್ ಮೆಟ್ಟಿಲೇರಿದ್ದು. ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್ ದೂರಿನ ಮರು ಪರಿಗಣನೆಗೆ ಆದೇಶಿಸಿತ್ತು.