ಕಾರು ಓವರ್ ಟೇಕ್ ಗಲಾಟೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ ಅನಂತ್ ಕುಮಾರ್ ಹೆಗಡೆ ವಿರುದ್ಧ ದಾಬಸ್ ಪೇಟೆ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಪ್ರಕರಣದಲ್ಲಿ ಎ-1 ಆಗಿರುವ ಅನಂತ್ ಕುಮಾರ್ ಹೆಗಡೆ. ಹೆಗಡೆ ಗನ್ ಮ್ಯಾನ್, ಕಾರಿನ ಡ್ರೈವರ್ ಹೆಸರನ್ನು ಉಲ್ಲೇಖಿಸಲಾಗಿದೆ.
ಅನಂತ್ ಕುಮಾರ್ ಹೆಗಡೆ ಹಲ್ಲೆ ಮಾಡಿ ಅವಾಚ್ಯವಾಗಿ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ. ಅನಂತ್ ಕುಮಾರ್ ಹೆಗಡೆಯ ಗನ್ ಮ್ಯಾನ್ ಗನ್ ತೋರಿಸಿ ಬೆದರಿಸಿದ್ದಾರೆ.
ನಿಮ್ಮನ್ನು ಶೂಟ್ ಮಾಡ್ತೀನಿ ಅಂದಿರೋದು FIR ನಲ್ಲಿ ಉಲ್ಲೇಖವಾಗಿದೆ. ಸೆಕ್ಷನ್ 117 (2), 126 (2), 74, 351 , 352 ಬಿಎನ್ಎಸ್ ಅಡಿ ದೂರು ದಾಖಲಿಸಿದ್ದೀವಿ ಅಂತ ಬೆಂಗಳೂರು ಗ್ರಾಮಾಂತರ ಎಸ್ಪಿ ಸಿ.ಕೆ ಬಾಬ ಮಾಹಿತಿ ನೀಡಿದ್ದಾರೆ.
ಏನಿದು ಪ್ರಕರಣ..?
ನೆಲಮಂಗಲ ತಾಲೂಕಿನ ಹಳೇ ನಿಜಗಲ್ ಬಳಿ ಕಾರು ಓವರ್ ಟೇಕ್ ಮಾಡಿರೋ ವಿಚಾರಕ್ಕೆ ಗಲಾಟೆ ನಡೆದಿದ್ದು, ಈ ವೇಳೆ ಮಾಜಿ ಸಂಸದ ಅನಂತ್ ಕುಮಾರ್ ಹೆಗಡೆ ಗನ್ ಮ್ಯಾನ್ ಹಾಗೂ ಚಾಲಕ ಹಲ್ಲೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ಇನೋವಾ ಕಾರು ಮಾಜಿ ಸಂಸದ ಅನಂತ್ ಕುಮಾರ್ ಹೆಗಡೆ ಕಾರನ್ನು ಓವರ್ ಟೇಕ್ ಮಾಡಿದ್ದಕ್ಕೆ ಗಲಾಟೆ ನಡೆದಿದೆ. ಅನಂತ್ ಕುಮಾರ್ ಹೆಗಡೆ ಬೆಂಬಲಿಗರು ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಗಾಯಾಳುಗಳು ದಾಬಸ್ ಪೇಟೆಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ನೆಲಮಂಗಲ ಗ್ರಾಮಾಂತರ ಠಾಣಾ ಡಿವೈಎಸ್ಪಿ ಕಛೇರಿಯಲ್ಲಿ ಅನಂತ್ ಕುಮಾರ್ ಹೆಗಡೆಯ ವಿಚಾರಣೆ ನಡೆದಿದೆ.