ನವದೆಹಲಿ : ವೈದ್ಯರ ನಿರ್ಲಕ್ಷ್ಯಕ್ಕೆ ಐದು ಮಕ್ಕಳು ಎಚ್ಐವಿ ಪಾಸಿಟಿವ್ ಆಗಿರುವ ಬೆಚ್ಚಿ ಬೀಳಿಸುವ ಪ್ರಮಾದವೊಂದು ಜಾರ್ಖಂಡ್ನಲ್ಲಿ ನಡೆದಿದೆ. ಈ ಮಕ್ಕಳು ಥಲಸ್ಸೆಮಿಯಾ ರೋಗ ಪೀಡಿತರಾಗಿದ್ದರು. ಮಕ್ಕಳಿಗೆ ಚೈಬಾಸಾದಲ್ಲಿರುವ ಸ್ಥಳೀಯ ರಕ್ತ ನಿಧಿಯಿಂದ ಎಚ್ಐವಿ ಸೋಂಕಿತರ ರಕ್ತ ನೀಡಲಾಗಿದೆ ಎಂದು ಏಳು ವರ್ಷದ ಮಗುವಿನ ಕುಟುಂಬ ಆರೋಪಿಸಿದೆ. ರಾಂಚಿಯ ಐದು ಸದಸ್ಯರ ವೈದ್ಯಕೀಯ ತಂಡವು ಈ ವಿಷಯದ ಬಗ್ಗೆ ತನಿಖೆ ನಡೆಸುತ್ತಿದೆ. ಮಕ್ಕಳಿಗೆ HIV ಸೋಂಕಿತ ರಕ್ತ ಹೇಗೆ ದೊರೆತಿದೆ ಎಂಬುದನ್ನು ಕಂಡುಹಿಡಿಯಲು ಜಾರ್ಖಂಡ್ ಸರ್ಕಾರ ವೈದ್ಯಕೀಯ ತಂಡವನ್ನು ರಚಿಸಿದೆ.
ಚೈಬಾಸಾದಲ್ಲಿರುವ ಸ್ಥಳೀಯ ರಕ್ತ ನಿಧಿಯಿಂದ ಎಚ್ಐವಿ ಸೋಂಕಿತ ರಕ್ತ ವರ್ಗಾವಣೆಯಾಗಿದೆ. ಈ ಬ್ಲಡ್ ಬ್ಯಾಂಕ್ನಿಂದ 25 ಯೂನಿಟ್ಗಳ ರಕ್ತ ವರ್ಗಾವಣೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜಿಲ್ಲಾ ಸಿವಿಲ್ ಸರ್ಜನ್ ಡಾ. ಸುಶಾಂತೋ ಮಜ್ಹೀ ಒಂದು ವಾರದ ಹಿಂದೆ ಮಗುವಿಗೆ ಎಚ್ಐವಿ ಪಾಸಿಟಿವ್ ಇರುವುದನ್ನು ಪತ್ತೆ ಮಾಡಿದ್ದರು. ಕಲುಷಿತ ಸೂಜಿಗಳಿಂದ ಚುಚ್ಚಿಸಿಕೊಳ್ಳುವುದು ಸೇರಿದಂತೆ ಇತರ ಅಂಶಗಳಿಂದಾಗಿ ಎಚ್ಐವಿ ಸೋಂಕು ಸಂಭವಿಸಬಹುದು ಎಂದು ಅವರು ಹೇಳಿದರು.
ಜಾರ್ಖಂಡ್ನ ನಿರ್ದೇಶಕ (ಆರೋಗ್ಯ ಸೇವೆಗಳು) ಡಾ. ದಿನೇಶ್ ಕುಮಾರ್ ನೇತೃತ್ವದ ಐದು ಸದಸ್ಯರ ತಂಡವು ಸದರ್ ಆಸ್ಪತ್ರೆಯ ರಕ್ತ ನಿಧಿ ಮತ್ತು ಮಕ್ಕಳ ತೀವ್ರ ನಿಗಾ ಘಟಕದ ವಾರ್ಡ್ ಅನ್ನು ಪರಿಶೀಲಿಸಿದೆ ಮತ್ತು ಮಕ್ಕಳಿಂದ ವಿವರಗಳನ್ನು ಸಂಗ್ರಹಿಸಿದೆ. ತನಿಖೆಯ ಸಮಯದಲ್ಲಿ ರಕ್ತ ವರ್ಗಾವಣೆಯಲ್ಲಿ ಕೆಲವು ವ್ಯತ್ಯಾಸಗಳು ಪತ್ತೆಯಾಗಿವೆ ಎಂದು ನಿರ್ದೇಶಕರು ಹೇಳಿದರು ಮತ್ತು ಅದನ್ನು ಪರಿಹರಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಆರಂಭಿಕ ತನಿಖೆಯಲ್ಲಿ ಥಲಸ್ಸೆಮಿಯಾ ರೋಗಿಗೆ ಕಲುಷಿತ ರಕ್ತವನ್ನು ವರ್ಗಾವಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ತನಿಖೆಯ ಸಮಯದಲ್ಲಿ ರಕ್ತ ಬ್ಯಾಂಕಿನಲ್ಲಿ ಕೆಲವು ವ್ಯತ್ಯಾಸಗಳು ಪತ್ತೆಯಾಗಿದ್ದು, ಅವುಗಳನ್ನು ಪರಿಹರಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ” ಎಂದು ಕುಮಾರ್ ಹೇಳಿದರು.
ಪ್ರಸ್ತುತ, ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯಲ್ಲಿ 515 ಎಚ್ಐವಿ-ಪಾಸಿಟಿವ್ ಪ್ರಕರಣಗಳು ಮತ್ತು 56 ಥಲಸ್ಸೆಮಿಯಾ ರೋಗಿಗಳಿದ್ದಾರೆ. ಕುಮಾರ್ ನೇತೃತ್ವದ ತನಿಖಾ ತಂಡದಲ್ಲಿ ಡಾ. ಶಿಪ್ರಾ ದಾಸ್, ಡಾ. ಎಸ್. ಎಸ್. ಪಾಸ್ವಾನ್, ಡಾ. ಭಗತ್, ಜಿಲ್ಲಾ ಸಿವಿಲ್ ಸರ್ಜನ್ ಡಾ. ಸುಶಾಂತೋ ಮಜ್ಹೀ, ಡಾ. ಶಿವಚರಣ್ ಹನ್ಸ್ದಾ ಮತ್ತು ಡಾ. ಮಿನು ಕುಮಾರಿ ಸೇರಿದ್ದಾರೆ.































