ಮುಂಬೈ: ನಾಸಿಕ್ ಸಮೀಪ ಮಾಲೇಗಾಂವ್ನಲ್ಲಿ 2008ರಲ್ಲಿ ಸಂಭವಿಸಿದ ಬಾಂಬ್ ಸ್ಫೋಟ ಪ್ರಕರಣದಲ್ಲಿ ಬಿಜೆಪಿಯ ಮಾಜಿ ಸಂಸದೆ ಪ್ರಜ್ಞಾ ಠಾಕೂರ್ ಸೇರಿ 7 ಆರೋಪಿಗಳನ್ನು ನ್ಯಾಯಾಲಯ ದೋಷಮುಕ್ತಿಗೊಳಿಸಿದೆ.ಪ್ರಕರಣ ಸಂಭವಿಸಿದ 17 ವರ್ಷಗಳ ಬಳಿಕ ತೀರ್ಪು ನೀಡುವ ಸಂದರ್ಭದಲ್ಲಿ ಎನ್ಐಎ ವಿಶೇಷ ಕೋರ್ಟ್ ಈ ಪ್ರಕರಣದ ತನಿಖೆಯೇ ಸರಿಯಾಗಿ ನಡೆದಿಲ್ಲ ಎಂದು ಅಭಿಪ್ರಾಯಪಟ್ಟು ಎಲ್ಲ ಆರೋಪಿಗಳನ್ನು ಖುಲಾಸೆಗೊಳಿಸಿದೆ.
ಏಪ್ರಿಲ್ 19ರಂದು ಪ್ರಕರಣದ ವಿಚಾರಣೆ ಮುಗಿಸಿದ್ದ ಕೋರ್ಟ್ ಮೇ 8ರಂದು ಹಾಜರಿರುವಂತೆ ಆರೋಪಿಗಳಿಗೆ ಸೂಚಿಸಿತ್ತು. ನ್ಯಾಯಾಧೀಶರಾದ ಎ.ಕೆ.ಲಾಹೋಟಿ ಅವರು ತೀರ್ಪು ಪ್ರಕಟಿಸಲು ಹೆಚ್ಚಿನ ಸಮಯ ಬೇಕು. ಜುಲೈ 31ರಂದು ಎಲ್ಲ ಆರೋಪಿಗಳು ಹಾಜರಿರಬೇಕು ಎಂದು ಆರೋಪಿಗಳಿಗೆ ತಿಳಿಸಿದ್ದರು.
ಏನಿದು ಪ್ರಕರಣ?
2008ರ ಸೆ.29ರಂದು ರಮ್ಜಾನ್ ಮಾಸದಲ್ಲಿ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಮುಸ್ಲಿಮ್ ಪ್ರಾಬಲ್ಯದ ಮಾಲೇಗಾಂವ್ ನಗರದ ಚೌಕದಲ್ಲಿ ಬೈಕ್ನಲ್ಲಿಟ್ಟಿದ್ದ ಬಾಂಬ್ ಸ್ಫೋಟಿಸಿ 6 ಜನರು ಮೃತಪಟ್ಟು, 100ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಆಗ ಸೇನೆಯ ಕರ್ತವ್ಯದಲ್ಲಿದ್ದ ಕರ್ನಲ್ ದರ್ಜೆಯ ಅಧಿಕಾರಿ ಪ್ರಸಾದ್ ಪುರೋಹಿತ್ ಸಹಿತ ಏಳು ಹಿಂದುಗಳನ್ನು ಈ ಘಟನೆಗೆ ಸಂಬಂಧಿಸಿ ಬಂಧಿಸಲಾಗಿತ್ತು. ಇದು ಹಿಂದು ಭಯೋತ್ಪಾದನೆ ಎಂದು ಅಂದಿನ ದಿನಗಳಲ್ಲಿ ವ್ಯಾಖ್ಯಾನಿಸಲಾಗಿತ್ತು.
ಈ ಪ್ರಕರಣವನ್ನು ಮುಂಬೈ ಭಯೋತ್ಪಾದಕ ನಿಗ್ರಹ ಪಡೆ ಪ್ರಾಥಮಿಕ ತನಿಖೆ ನಡೆಸಿತ್ತು. ನಂತರ ತನಿಖೆಯ ಹೊಣೆಯನ್ನು ಎನ್ಐಎ ವಹಿಸಿಕೊಂಡಿತ್ತು. ಬಿಜೆಪಿ ಮಾಜಿ ಸಂಸದೆ ಪ್ರಜ್ಞಾಸಿಂಗ್ ಠಾಕೂರ್, ಮಾಜಿ ಸೇನಾಧಿಕಾರಿ ಪ್ರಸಾದ್ ಪುರೋಹಿತ್ (ನಿವೃತ್ತ), ಮೇಜರ್ ರಮೇಶ್ ಉಪಾಧ್ಯಾಯ (ನಿವೃತ್ತ) ಸೇರಿದಂತೆ ಏಳು ಮಂದಿ ಆರೋಪಿಗಳ ಮೇಲೆ ಐಪಿಸಿ, ಯುಎಪಿಎ ಅನ್ವಯ ಆರೋಪ ಹೊರಿಸಲಾಗಿತ್ತು.