ಮಾಜಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಅವರ ಚಿತ್ರದುರ್ಗದ ಐತಿಹಾಸಿಕ ನಿವಾಸವನ್ನು ಕೊನೆಗೂ ಕರ್ನಾಟಕ ಸರ್ಕಾರ ಖರೀದಿಸಿದೆ. ನಾಲ್ಕು ವರ್ಷಗಳ ವಿಳಂಬದ ನಂತರ ಈ ಖರೀದಿ ಪ್ರಕ್ರಿಯೆ ಅಂತಿಮಗೊಂಡಿದ್ದು, ಮಾರುಕಟ್ಟೆ ಮೌಲ್ಯಕ್ಕಿಂತ ಕಡಿಮೆ ಬೆಲೆಗೆ ಮನೆ ಖರೀದಿಸಲಾಗಿದೆ.
ಹೌದು, ಮಾರುಕಟ್ಟೆ ಮೌಲ್ಯಕ್ಕಿಂತಲೂ ಸುಮಾರು 1 ಕೋಟಿ ರೂ. ಕಡಿಮೆ ಮೊತ್ತಕ್ಕೆ ಸರ್ಕಾರ, ನಿಜಲಿಂಗಪ್ಪ ನಿವಾಸವನ್ನು ಖರೀದಿ ಮಾಡಿದ ಬಗ್ಗೆ ವರದಿಯಾಗಿದೆ. ನಿಜಲಿಂಗಪ್ಪ ಅವರು ಬದುಕಿ, ಬಾಳಿರುವ ಚಿತ್ರದುರ್ಗದ ಮನೆಯ ಖರೀದಿಗೆ ಸರ್ಕಾರ ಉತ್ಸಾಹ ತೋರದ್ದರಿಂದ ಇತ್ತೀಚೆಗೆ ಕೆಲವು ದಿನಗಳ ಹಿಂದೆ ಅವರ ಮಗ ಎಸ್ಎನ್ ಕಿರಣಶಂಕರ್ ”ಮನೆ ಮಾರಾಟಕ್ಕಿದೆ” ಎಂದು ಜಾಹೀರಾತು ನೀಡಿದ್ದರು.
ಇದರಿಂದ ಐತಿಹಾಸಿಕ ನಿವಾಸ ಖಾಸಗಿಯವರ ಪಾಲಾಗುವ ಆತಂಕ ಎದುರಾಗಿತ್ತು. ಇದೀಗ ಅಂತಿಮವಾಗಿ, ನಾಲ್ಕು ವರ್ಷಗಳ ವಿಳಂಬದ ಬಳಿಕ ಕರ್ನಾಟಕ ಸರ್ಕಾರ ಮನೆ ಖರೀದಿಸಿದೆ. ಎಸ್ಎನ್ ಕಿರಣಶಂಕರ್ ಅವರು ಸ್ಥಳೀಯ ತಹಶೀಲ್ದಾರ್ ಮೂಲಕ ಮನೆಯನ್ನು ಸರ್ಕಾರಕ್ಕೆ ಹಸ್ತಾಂತರಿಸಿದರು ಎಂದು ‘ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್’ ವರದಿ ಮಾಡಿದೆ. ಕಿರಣಶಂಕರ್ ಅವರು ಕರ್ನಾಟಕ ಸರ್ಕಾರದ ಮುಖ್ಯ ವಾಸ್ತುಶಿಲ್ಪಿಯಾಗಿ ಸೇವೆ ಸಲ್ಲಿಸಿದ್ದರು.
ಮಹಾತ್ಮಾ ಗಾಂಧಿಯ ಭಾಗವಹಿಸಿದ್ದ 1924 ರ ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವದ ಸಂದರ್ಭದಲ್ಲೇ ಬೆಳಗಾವಿಯಲ್ಲಿನ ಐತಿಹಾಸಿಕ ನಿವಾಸ ಸರ್ಕಾರದ ಅಧೀನಕ್ಕೆ ಬಂದಿರುವುದು ವಿಶೇಷ.