ನವದೆಹಲಿ : ಕಾಂಗ್ರೆಸ್ನ ಅಧಿನಾಯಕಿ ಸೋನಿಯಾ ಗಾಂಧಿಯವರ ಆರೋಗ್ಯ ತೀವರ ಹಡಗೆಟ್ಟಿದ್ದು, ಅವರನ್ನು ದೆಹಲಿಯ ಸರ್ ಗಂಗಾ ರಾಮ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಂದಾಗಿ ಅವರನ್ನು ಗ್ಯಾಸ್ಟ್ರೋ ವಿಭಾಗಕ್ಕೆ ದಾಖಲಿಸಲಾಗಿದ್ದು, ಅವರ ಮೇಲೆ ನಿಗಾ ಇರಿಸಲಾಗಿದೆ.
ಜೂನ್ 7ರಂದು ಸೋನಿಯಾ ಗಾಂಧಿ ಅವರನ್ನು ವೈದ್ಯಕೀಯ ತಪಾಸಣೆಗಾಗಿ ಶಿಮ್ಲಾಕ್ಕೆ ಕರೆದೊಯ್ಯಲಾಗಿತ್ತು. ಕೆಲವು ಸಮಯದಿಂದ ಸೋನಿಯಾ ಗಾಂಧಿಯವರ ಅನಾರೋಗ್ಯದ ವರದಿಗಳು ಹೊರಬರುತ್ತಿವೆ. ಆದಾಗ್ಯೂ ಈ ನಿಟ್ಟಿನಲ್ಲಿ ಯಾವುದೇ ನಿರ್ದಿಷ್ಟ ಮಾಹಿತಿ ಹೊರಬಂದಿಲ್ಲ. ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಅವರ ಸಲಹೆಗಾರರು ಹಿರಿಯ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಅಧಿಕ ರಕ್ತದೊತ್ತಡವಿತ್ತು ಎಂದು ಹೇಳಿದ್ದಾರೆ.
ಶಿಮ್ಲಾದ ಆಸ್ಪತ್ರೆಯಲ್ಲಿ ಅವರ ನಿಯಮಿತ ವೈದ್ಯಕೀಯ ತಪಾಸಣೆ ನಡೆಸಲಾಯಿತು. ಅಧಿಕ ರಕ್ತದೊತ್ತಡದ ಇದ್ದ ಕಾರಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು.ಇದು ಸಾಮಾನ್ಯ ತಪಾಸಣೆಯಾಗಿತ್ತು. ಇದಾದ ನಂತರ ಅವರು ತಮ್ಮ ಮನೆಗೆ ಮರಳಿದರು ಎಂದು ಮಾಹಿತಿ ನೀಡಿದ್ದಾರೆ.
ಒಂದು ವಾರದ ಹಿಂದೆ ಸೋನಿಯಾ ಗಾಂಧಿ ಇದ್ದಕ್ಕಿದ್ದಂತೆ ಅಲ್ಲಿನ ಇಂದಿರಾ ಗಾಂಧಿ ವೈದ್ಯಕೀಯ ಕಾಲೇಜಿಗೆ (ಐಜಿಎಂಸಿ)ಗೆ ಹೋಗಿದ್ದು, ವೈದ್ಯರು ಅವರ ತಪಾಸಣೆ ನಡೆಸಿದ್ದರು. ಮುನ್ನೆಚ್ಚರಿಕೆಯಾಗಿ, ಅವರಿಗೆ ಕೆಲವು ಪರೀಕ್ಷೆಗಳನ್ನು ಮಾಡಲಾಗಿತ್ತು, ಆರೋಗ್ಯ ಉತ್ತಮವಾಗಿತ್ತು. ಸುಮಾರು ಒಂದು ಗಂಟೆಯ ನಂತರ, ಸೋನಿಯಾ ಛರಬ್ರಾದಲ್ಲಿರುವ ತಮ್ಮ ಮಗಳು ಪ್ರಿಯಾಂಕಾ ಗಾಂಧಿಯವರ ಮನೆಗೆ ಮರಳಿದ್ದರು.
2022ರಲ್ಲಿ ಸೋನಿಯಾ ಗಾಂಧಿ ಕೊರೊನಾ ಸೋಂಕಿಗೆ ಒಳಗಾಗಿದ್ದರು. ಈ ಸಮಯದಲ್ಲಿಯೂ ಅವರನ್ನು ಆಸ್ಪತ್ರೆಯಲ್ಲಿ ಇರಿಸಲಾಗಿತ್ತು. ಅವರಿಗೆ ಕ್ಯಾನ್ಸರ್ ರೋಗ ಇದೆ ಎನ್ನಲಾಗುತ್ತಿದೆ. ಇದರ ಚಿಕಿತ್ಸೆಗಾಗಿ ಹಲವು ಬಾರಿ ಅಮೆರಿಕಕ್ಕೆ ಹೋಗಿದ್ದರು.
 
				 
         
         
         
															 
                     
                     
                     
                     
                    


































 
    
    
        