ತಿರುವನಂತಪುರಂ : ಕೇರಳ ರಾಜ್ಯದ ಬಿಜೆಪಿ ಅಧ್ಯಕ್ಷರು ಯಾರಾಗ್ತಾರೆ ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ. ಮಾಜಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರನ್ನು ಬಿಜೆಪಿ ಕೇರಳ ರಾಜ್ಯದ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸೋಮವಾರ (ಮಾ. 24) ತಿರುವನಂತಪುರದಲ್ಲಿ ನಡೆದ ಬಿಜೆಪಿ ರಾಜ್ಯ ಪರಿಷತ್ ಸಭೆಯಲ್ಲಿ ಈ ಮಹತ್ವದ ಘೋಷಣೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ನಿರ್ಗಮಿತ ಅಧ್ಯಕ್ಷ ಕೆ.ಸುರೇಂದ್ರನ್ ಮತ್ತು ರಾಜ್ಯ ಉಸ್ತುವಾರಿ ಪ್ರಕಾಶ್ ಜಾವಡೇಕರ್ ಸೇರಿದಂತೆ ಬಿಜೆಪಿಯ ಅನೇಕ ರಾಜ್ಯ ನಾಯಕರು ಉಪಸ್ಥಿತರಿದ್ದರು. ಸುರೇಂದ್ರನ್ ಅವರು ಪಕ್ಷದ ಧ್ವಜವನ್ನು ಚಂದ್ರಶೇಖರ್ ಅವರಿಗೆ ವೇದಿಕೆಯಲ್ಲಿ ಹಸ್ತಾಂತರಿಸಿದರು.
ಚಂದ್ರಶೇಖರ್ ಅವರು ಈ ಹುದ್ದೆಗೆ ಏಕೈಕ ನಾಮನಿರ್ದೇಶಿತರಾಗಿದ್ದರು. ಇಲ್ಲಿನ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಭಾನುವಾರ(ಮಾ.23) ನಾಮಪತ್ರ ಸಲ್ಲಿಸಿದ್ದರು. ರಾಜೀವ್ ಚಂದ್ರಶೇಖರ್ ಬಗ್ಗೆ : ಕೇರಳ ಸ್ಥಳೀಯ ಚುನಾವಣೆಗೂ ಮುನ್ನ ರಾಜೀವ್ ಚಂದ್ರಶೇಖರ್ ಹೆಗಲಿಗೆ ಹೊಸ ಜವಾಬ್ದಾರಿ ಕೊಡಲಾಗಿದೆ. ರಾಜೀವ್ ಚಂದ್ರಶೇಖರ್ ಗುಜರಾತ್‌ನ ಅಹಮದಾಬಾದ್‌ನವರು. ಬಿಜೆಪಿ ರಾಷ್ಟ್ರೀಯ ವಕ್ತಾರರಾಗಿ, ಕೇರಳ ಎನ್‌ಡಿಎ ಘಟಕದ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದ ಅವರು ಮೋದಿ ಸಂಪುಟದಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ , ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯ ಮತ್ತು ಜಲಶಕ್ತಿ ಸಚಿವಾಲಯದ ರಾಜ್ಯ ಸಚಿವರಾಗಿದ್ದರು. ಚಂದ್ರಶೇಖರ್ ಏಪ್ರಿಲ್ 2006 ರಿಂದ ಏಪ್ರಿಲ್ 2018 ರ ವರೆಗೆ ಕರ್ನಾಟಕವನ್ನು ಪ್ರತಿನಿಧಿಸುವ ರಾಜ್ಯಸಭೆಯ ಸ್ವತಂತ್ರ ಸದಸ್ಯರಾಗಿದ್ದರು. ಏಪ್ರಿಲ್ 2018 ರಲ್ಲಿ ಬಿಜೆಪಿ ಸದಸ್ಯರಾಗಿ ಮೂರನೇ ಆರು ವರ್ಷಗಳ ಅವಧಿಗೆ ಕರ್ನಾಟಕದಿಂದ ರಾಜ್ಯಸಭೆಗೆ ಮರು ಆಯ್ಕೆಯಾದರು. ಇದನ್ನೂ ಓದಿ : ಬಾಲ್ ಟ್ಯಾಂಪರಿಂಗ್ ಮಾಡಿದ್ರಾ ಸಿಎಸ್‌ಕೆ ಆಟಗಾರರು; ವೈರಲ್ ಆಯ್ತು ವೀಡಿಯೋ ಅಂದ್ಹಾಗೆ ರಾಜೀವ್ ಚಂದ್ರಶೇಖರ್ 2024ರ ಲೋಕಸಭಾ ಚುನಾವಣೆಯಲ್ಲಿ ತಿರುವನಂತಪುರಂನಿಂದ ಎನ್‌ಡಿಎ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಕಾಂಗ್ರೆಸ್ ಮುಖಂಡ ಶಶಿ ತರೂರ್ ವಿರುದ್ಧ 16,077 ಮತಗಳಿಂದ ಸೋತಿದ್ದರು.

































