ಚೆನ್ನೈ: ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿರುವ ಹಿನ್ನೆಲೆಯಲ್ಲಿ ಮಾಜಿ ಯೋಧನೋರ್ವನು ತನಗೆ ಸೇರಿದ 4 ಕೋಟಿ ರೂ. ಮೌಲ್ಯದ ಆಸ್ತಿ ಪತ್ರಗಳನ್ನು ದೇವಸ್ಥಾನದ ಹುಂಡಿಗೆ ಹಾಕಿರುವ ವಿಚಿತ್ರ ಘಟನೆಯೊಂದು ಜಿಲ್ಲೆಯಲ್ಲಿ ನಡೆದಿದೆ ತಮಿಳುನಾಡಿನ ತಿರುವಣ್ಣಾಮಲೈನ ರೇಣುಕಾಂಬಾಳ್ ದೇವಸ್ಥಾನದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ.
ನಿವೃತ್ತ ಸೇನಾಧಿಕಾರಿ ಎಸ್. ವಿಜಯನ್ ಎಂಬವರು ತಮಗೆ ಸೇರಿದ 4ಕೋಟಿಯ ಆಸ್ತಿಯನ್ನು ದೇವಸ್ಥಾನದ ಹುಂಡಿಗೆ ಹಾಕಿರುವ ವ್ಯಕ್ತಿ.
ದೇವಸ್ಥಾನದ ಆಡಳಿತ ಮಂಡಳಿ ಹೇಳಿರುವಂತೆ ವರ್ಷದ ಕೆಲವು ದಿನಗಳಲ್ಲಿ ದೇವಸ್ಥಾನದ ಹುಂಡಿಯನ್ನು ತೆರೆಯಲಾಗುತ್ತದೆ. ಜೊತೆಗೆ ಅದರಲ್ಲಿರುವ ಹಣ ಮತ್ತು ಚಿನ್ನ ಬೆಳ್ಳಿಯ ರೂಪದಲ್ಲಿ ಬಂದಿರುವ ವಸ್ತುಗಳನ್ನು ಲೆಕ್ಕ ಮಾಡಲಾಗುತ್ತದೆ ಅದರಂತೆ ಜೂನ್ 24ರಂದು ದೇವಸ್ಥಾನದ ಹುಂಡಿ ಎಣಿಕೆ ಕಾರ್ಯ ನಡೆಸಲಾಗಿತ್ತು. ಈ ವೇಳೆ ಹುಂಡಿಯಲ್ಲಿ ಮನೆಗೆ ಸಂಬಂಧಿಸಿದ ಆಸ್ತಿ ಪತ್ರ ಸಿಕ್ಕಿದ್ದು, ಇದನ್ನ ನೋಡಿದ ದೇವಸ್ಥಾನದ ಆಡಳಿತ ಅಧಿಕಾರಿಗಳು ದಂಗಾಗಿದ್ದಾರೆ.
ಇನ್ನು ಈ ವಿಚಾರಕ್ಕೆ ಸಂಬಂಧಿಸಿ ದೇವಸ್ಥಾನದ ಆಡಳಿತ ಮಂಡಳಿ ವಿಜಯನ್ ಅವರನ್ನು ಸಂಪರ್ಕಿಸಿ ವಿಚಾರಿಸಿದ ವೇಳೆ, ನಾನು ಸ್ವ ಇಚ್ಛೆಯಿಂದ ನನ್ನ ಮನೆಯ ಕಾಗದ ಪತ್ರಗಳನ್ನು ದೇವಸ್ಥಾನಕ್ಕೆ ನೀಡುತ್ತಿದ್ದೇನೆ ಅಲ್ಲದೆ ಲಿಖಿತ ರೂಪದಲ್ಲೂ ಆಸ್ತಿಯನ್ನು ದೇವಸ್ಥಾನಕ್ಕೆ ನೀಡಲು ಒಪ್ಪಿಕೊಂಡಿರುವುದಾಗಿ ಹೇಳಿದ್ದಾರೆ.
ವಿಜಯನ್ ಅವರ ಪತ್ನಿ ಕಸ್ತೂರಿ ಸರ್ಕಾರಿ. ಶಾಲಾ ಶಿಕ್ಷಕಿಯಾಗಿದ್ದು ಅವರಿಗೆ ಸುಬ್ಬುಲಕ್ಷ್ಮಿ ಮತ್ತು ರಾಜಲಕ್ಷ್ಮಿ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದು ಅವರು ಮದುವೆಯಾಗಿ ವಿದೇಶದಲ್ಲಿ ವಾಸಿಸುತ್ತಿದ್ದಾರೆ. ಈ ನಡುವೆ ವಿಜಯನ್ ಮತ್ತು ಪತ್ನಿ ಕಸ್ತೂರಿ ನಡುವೆ ಭಿನ್ನಾಭಿಪ್ರಾಯ ಉಂಟಾಗಿ ಕೆಲ ವರುಷಗಳಿಂದ ಬೇರೆ ಬೇರೆಯಾಗಿ ವಾಸವಾಗಿದ್ದಾರೆ. ಜೊತೆಗೆ ಕೆಲವು ತಿಂಗಳ ಹಿಂದೆ ದಂಪತಿಗಳ ನಡುವೆ ಜಗಳ ನಡೆದಿದ್ದು, ಕಸ್ತೂರಿಯವರ ಸಂಬಂಧಿಕರು ವಿಜಯನ್ ಅವರಿಗೆ ಬೆದರಿಕೆ ಹಾಕಿದ ಎಂದು ಹೇಳಲಾಗಿದೆ. ಇದರಿಂದಾಗಿ ತೀವ್ರ ಸಂಕಷ್ಟದಲ್ಲಿದ್ದ ವಿಜಯನ್, ಕೆಲವು ದಿನಗಳ ಹಿಂದೆ ಪಟವೇಡು ಗ್ರಾಮದಲ್ಲಿರುವ ಶ್ರೀ ರೇಣುಕಾಂಬಳ ದೇವಸ್ಥಾನಕ್ಕೆ ಹೋಗಿ ನಾಲ್ಕು ಕೋಟಿ ಮೌಲ್ಯದ ಆಸ್ತಿ ಪತ್ರಗಳನ್ನು ದೇವಸ್ಥಾನದ ಹುಂಡಿಗೆ ಹಾಕಿ ಬಂದಿದ್ದಾರೆ.
ಇನ್ನು ಆಸ್ತಿ ವಿಚಾರಕ್ಕೆ ಸಂಬಂಧಿಸಿ ಹೇಳಿಕೆ ನೀಡಿದ ವಿಜಯನ್ ನಾನು ದೇವಸ್ಥಾನಕ್ಕೆ ದಾನ ನೀಡಿದ್ದು ನನ್ನ ಸ್ವಂತ ಆಸ್ತಿಯಷ್ಟೇ ಇದು ಪೂರ್ವಜರಿಗೆ ಸೇರಿದ ಆಸ್ತಿಯಲ್ಲ ಇದರ ಸಂಪೂರ್ಣ ಹಕ್ಕು ನನಗೆ ಮಾತ್ರ ಇರುವುದು ಎಂದು ಸ್ಪಷ್ಟಪಡಿಸಿದ್ದಾರೆ.
ಇನ್ನು ಮನೆಯ ಕಾಗದ ಪತ್ರಗಳನ್ನು ದೇವಸ್ಥಾನದ ಹುಂಡಿಗೆ ಹಾಕಿರುವ ವಿಚಾರ ಗೊತ್ತಾಗುತ್ತಿದ್ದಂತೆ ಪತ್ನಿ, ಮತ್ತು ಮಕ್ಕಳು ನಮಗೆ ವಿಚಾರ ತಿಳಿಸದೇ ಈ ನಿರ್ಧಾರ ಕೈಗೊಂಡಿದ್ದಾರೆ ದಯವಿಟ್ಟು, ನಮ್ಮ ಮನೆಯ ಕಾಗದ ಪತ್ರಗಳನ್ನು ನಮಗೆ ಒಪ್ಪಿಸಿ ಎಂದು ದೇವಸ್ಥಾನದ ಆಡಳಿತ ಮಂಡಳಿಯನ್ನ ಕೇಳಿಕೊಂಡಿದ್ದಾರೆ, ಇನ್ನು ದೇವಸ್ಥಾನದ ಆಡಳಿತ ಮಂಡಳಿ ಯಾವ ನಿರ್ಧಾರಕ್ಕೆ ಬರುತ್ತದೆ ಎಂಬುದನ್ನು ಕಾದು ನೋಡಬೇಕಷ್ಟೆ.
 
				 
         
         
         
															 
                     
                     
                     
                    


































 
    
    
        