ತುಮಕೂರು: ಮಹಿಳೆಯನ್ನು ಭೀಕರವಾಗಿ ಕೊಲೆ ಮಾಡಿದ ಬಳಿಕ ಶವವನ್ನು ತುಂಡು ತುಂಡಾಗಿ ಕತ್ತರಿಸಿದ ಪ್ರಕರಣಕ್ಕೆ ಸಂಬಂಧಿಸಿದ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಮೃತ ಮಹಿಳೆಯನ್ನು ಲಕ್ಷ್ಮೀ ದೇವಮ್ಮ ಎಂದು ಗುರುತಿಸಲಾಗಿದೆ. ಮೃತ ಮಹಿಳೆಯ ಅಳಿಯ ಡಾ.ರಾಮಚಂದ್ರ ಸೇರಿದಂತೆ ನಾಲ್ವರನ್ನು ಕೊರಟಗೆರೆ ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆಗೆ ಒಳಪಡಿಸಿದ್ದಾರೆ.
ಮೃತ ಲಕ್ಷ್ಮೀ ದೇವಮ್ಮ, ತನ್ನ ಮಗಳನ್ನು ವೇಶ್ಯಾವಾಟಿಕೆಗೆ ಬಳಸಿಕೊಳ್ಳಲು ಹೊಂಚು ಹಾಕಿದ್ದಳಂತೆ. ಇದರಿಂದ ಬೇಸತ್ತ ಡಾ.ರಾಮಚಂದ್ರ ಸ್ನೇಹಿತರ ಸಹಾಯ ಪಡೆದುಕೊಂಡು ಲಕ್ಷ್ಮೀ ದೇವಮ್ಮ ಅವರನ್ನು ಫಾರ್ಮ್‌ಹೌಸ್‌ನಲ್ಲಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಕೊಲೆ ನಂತರ ಮೃತದೇಹವನ್ನು ತುಂಡುಗಳನ್ನಾಗಿ ಮಾಡಿ ಎಸೆದಿರುವ ಅನುಮಾನ ವ್ಯಕ್ತವಾಗಿದೆ.
ರಾಮಚಂದ್ರ ದಂತ ವೈದ್ಯನಾಗಿದ್ದು, ಗೆಳೆಯ ಸತೀಶ್ ಫಾರ್ಮ್‌ಹೌಸ್‌ನಲ್ಲಿ ಕೊಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಸತೀಶ್, ಕಿರಣ್ ಜೊತೆ ಸೇರಿ ರಾಮಚಂದ್ರ ಕೊಲೆಗೆ ಪ್ಲಾನ್ ಮಾಡಿದ್ದನಂತೆ. ಇನ್ನೋರ್ವನ ಹೆಸರು ತಿಳಿದು ಬಂದಿಲ್ಲ. ಲಕ್ಷ್ಮೀ ದೇವಮ್ಮ ಅವರನ್ನು ಕೊಲೆ ಬಳಿಕ ಆರೋಪಿಗಳು ಧರ್ಮಸ್ಥಳ ಯಾತ್ರೆಗೆ ತೆರಳಿದ್ದರು. ಅನುಮಾನಗೊಂಡು ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಸತ್ಯತೆ ಏನೆಂದು ತಿಳಿದು ಬಂದಿದೆ.
ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಹೊಳವನಹಳ್ಳಿ ಹೋಬಳಿಯ ಚಿಂಪುಗಾನಹಳ್ಳಿ ಬಳಿ ಗುರುವಾರ (ಆಗಸ್ಟ್ 7, 2025) 8 ಕಡೆ ಮಹಿಳೆಯ ಕೈಗಳು ಸೇರಿದಂತೆ ದೇಹದ ಭಾಗಗಳು ಸಿಕ್ಕಿದ್ದವು. ಶುಕ್ರವಾರ (ಆಗಸ್ಟ್ 8) ಮತ್ತೆ ಸಿದ್ದರಬೆಟ್ಟ ಮತ್ತು ಮಲ್ಲೇಕಾವು ಸುತ್ತಮುತ್ತ 10 ಕಡೆಯ ವಿವಿಧ ಸ್ಥಳಗಳಲ್ಲಿ ಕಪ್ಪು ಕವರಿನ ಪಾಕೇಟ್‌ನಲ್ಲಿ ಮಹಿಳೆಯ ಕಾಲು, ದೇಹ ಸೇರಿದಂತೆ ತಲೆ ಸಿಕ್ಕಿತ್ತು. ಕೊರಟಗೆರೆಯ ಸಿದ್ದರಬೆಟ್ಟದ ಸಮೀಪ, ಮರೇನಾಯಕನಹಳ್ಳಿ, ಮಲ್ಲೇಕಾವು, ಚಿಕ್ಕಾವಳಿ ಕೆರೆ, ಲಿಂಗಾಪುರ, ಜೋನಿಗರಹಳ್ಳಿ ಸೇರಿದಂತೆ 10 ಕಡೆಗಳಲ್ಲಿ ಮಹಿಳೆಯ ಶವದ ತುಂಡುಗಳು ಸಿಕ್ಕಿದ್ದವು.
ಮಹಿಳೆಯ ಶವದ ದೇಹದ ತುಂಡಿನ ಜೊತೆ ಸಿಕ್ಕಿರುವ ಪಾಕೇಟ್‌ನಲ್ಲಿ ಕಬ್ಬಿಣದ ಮೇಟಲ್ ಪೀಸ್‌ಗಳು ಪತ್ತೆಯಾಗಿವೆ. ಕೊರಟಗೆರೆ ಕ್ಷೇತ್ರದ ನಾಲ್ಕು ದಿಕ್ಕಿನ ರಸ್ತೆ ಬದಿಗಳಲ್ಲಿ ಶವದ ತುಂಡುಗಳನ್ನು ಹಾಕಿರುವ ಹಿಂದೆ ಆರಂಭದಲ್ಲಿ ವಾಮಚಾರದ ಶಂಕೆಯು ವ್ಯಕ್ತವಾಗಿತ್ತು. ಆದರೆ ಇದೀಗ ಈ ಪ್ರಕರಣ ಮತ್ತೊಂದು ಆಯಾಮವನ್ನು ಪಡೆದುಕೊಂಡಿದೆ.
ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯ ಚಿಂಪುಗಾನಹಳ್ಳಿ ಹಾಗೂ ಲಿಂಗಾಪುರ ಸೇರಿದಂತೆ ಹಲವು ಮಹಿಳೆಯ ಕೈಗಳು, ದೇಹದ ಕೆಲವು ಭಾಗಗಳು ಸಿಕ್ಕಿದ್ದು, ಕೈಗಳ ಮೇಲೆ ಎರಡು ಟ್ಯಾಟೂಗಳು ಕಂಡು ಬಂದಿದ್ದು, ಹೆಚ್ಚಿನ ತನಿಖೆಗಾಗಿ ದೇಹದ ಭಾಗಗಳನ್ನು ಎಫ್‌ಎಸ್‌ಎಲ್ ಗೆ ರವಾನೆ ಮಾಡಲಾಗುವುದು. ಈಗಾಗಲೇ ವಿಶೇಷ ತನಿಖಾ ತಂಡ ರಚಿಸಲಾಗಿದ್ದು, ಆದಷ್ಟು ಬೇಗ ಆರೋಪಿಗಳ ಹೆಡೆಮುರಿ ಕಟ್ಟಲಾಗುವುದು ಎಂದು ಎಸ್‌ಪಿ ಅಶೋಕ್ ವೆಂಕಟ್ ಹೇಳಿದ್ದರು.
ಕೊರಟಗೆರೆಯ ಜನತೆ ಎಂದಿಗೂ ಕಂಡಿರದ ಘಟನೆ ನಾವು ನೋಡುತ್ತಿದ್ದೇವೆ. ಮಹಿಳೆಯನ್ನು ಇಷ್ಟು ಬರ್ಬರವಾಗಿ ಕೊಲೆ ಮಾಡಿ ಇಂತಹ ಕೃತ್ಯದಿಂದ ಮನುಜ ಕುಲವು ಬೆಚ್ಚಿಬಿದ್ದಿದೆ. ಸಮಾಜದಲ್ಲಿ ಭಯದ ವಾತಾವರಣ ನಿರ್ಮಾಣಕ್ಕೆ ಕಾರಣವಾದ ಆರೋಪಿಗೆ ನಮ್ಮ ಪೊಲೀಸರು ತಕ್ಕ ಶಿಕ್ಷೆ ನೀಡಬೇಕಿದೆ ಎಂದು ಚಿಂಪುಗಾನಹಳ್ಳಿಯ ವಾಸಿ ದೇವರಾಜು ಆಗ್ರಹಿಸಿದ್ದರು.