ನವದೆಹಲಿ : ಮಥುರಾದ ದೆಹಲಿ-ಆಗ್ರಾ ಎಕ್ಸ್‌ಪ್ರೆಸ್‌ವೇಯಲ್ಲಿ ದಟ್ಟವಾದ ಮಂಜು ಕವಿದ ಹಿನ್ನೆಲೆ ಏಳು ಬಸ್‌ಗಳು ಮತ್ತು ಮೂರು ಕಾರುಗಳು ನಡುವೆ ಅಪಘಾತ ಉಂಟಾಗಿ ನಾಲ್ವರು ಸಾವನ್ನಪ್ಪಿ, 25 ಮಂದಿ ಗಾಯಗೊಂಡಿರುವ ಘಟನೆ ಮಂಗಳವಾರ ಬೆಳಗ್ಗೆ ಸಂಭವಿಸಿದೆ.
ಮಂಜಿನಿಂದಾಗಿ ರಸ್ತೆ ಸ್ಪಷ್ಟ ಗೋಚರತೆ ಇಲ್ಲದ ಹಿನ್ನೆಲೆ ಸರಣಿ ಅಪಘಾತ ಸಂಭವಿಸಿ ವಾಹನಗಳು ಜಖಂಗೊಂಡಿವೆ. ಡಿಕ್ಕಿಯ ನಂತರ ಹಲವಾರು ವಾಹನಗಳು ಬೆಂಕಿಗೆ ಆಹುತಿಯಾಗಿದ್ದು, ಸ್ಥಳದಲ್ಲಿ ಭಯದ ವಾತಾವರಣ ನಿರ್ಮಾಣವಾಯಿತು.
“ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ. ನಿರ್ಬಂಧಿಸಲಾದ ಹೆದ್ದಾರಿಯನ್ನು ತೆರವುಗೊಳಿಸಲು ಮತ್ತು ಗಂಭೀರ ಗಾಯಗೊಂಡ ಪ್ರಯಾಣಿಕರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ” ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಶ್ಲೋಕ್ ಕುಮಾರ್ ಮಾಹಿತಿ ನೀಡಿದ್ದಾರೆ.
“ಅಪಘಾತದ ಸುದ್ದಿ ತಿಳಿದ ತಕ್ಷಣ ಅಗ್ನಿಶಾಮಕ ದಳ, ಸ್ಥಳೀಯ ಪೊಲೀಸರು ಮತ್ತು ಸ್ಥಳೀಯ ಆಡಳಿತದ ತಂಡಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿವೆ. ರಕ್ಷಣಾ ಕಾರ್ಯಾಚರಣೆ ಬಹುತೇಕ ಪೂರ್ಣಗೊಂಡಿದೆ. ಅಪಘಾತದಲ್ಲಿ ನಾಲ್ವರು ಮೃತಪಟ್ಟಿರುವುದು ಖಚಿತವಾಗಿದೆ” ಎಂದು ಅವರು ತಿಳಿಸಿದ್ದಾರೆ.































