ಇಂಪಾಲ್ : ಸೇನೆ ಮತ್ತು ಉಗ್ರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ನಾಲ್ವರು ಯುನೈಟೆಡ್ ಕುಕಿ ರಾಷ್ಟ್ರೀಯ ಸೇನೆ ಉಗ್ರರು ಮೃತಪಟ್ಟ ಘಟನೆ ಮಣಿಪುರದ ಚುರಚಂದ್ಪುರ ಜಿಲ್ಲೆಯ ಪಶ್ಚಿಮಕ್ಕೆ ಸುಮಾರು 80 ಕಿ.ಮೀ ದೂರದಲ್ಲಿರುವ ಖಾನ್ಪಿ ಗ್ರಾಮದಲ್ಲಿ ನ. 3ರ ಮುಂಜಾನೆ ನಡೆದಿದೆ.
ಈ ಕಾರ್ಯಾಚರಣೆಯು ಗುಪ್ತಚರ ಮಾಹಿತಿಯನ್ನು ಆಧರಿಸಿತ್ತು. ಕಾರ್ಯಾಚರಣೆಯ ಸಮಯದಲ್ಲಿ, ಉಗ್ರಗಾಮಿಗಳು ಸೇನಾ ಬೆಂಗಾವಲು ಪಡೆಯ ಮೇಲೆ ಅಪ್ರಚೋದಿತ ಗುಂಡು ಹಾರಿಸಿದರು. ಇದರಿಂದಾಗಿ ಭದ್ರತಾ ಪಡೆಗಳು ಪ್ರತಿದಾಳಿ ನಡೆಸಿವೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ.
ಇತ್ತೀಚಿನ ದಿನಗಳಲ್ಲಿ ಯುನೈಟೆಡ್ ಕುಕಿ ರಾಷ್ಟ್ರೀಯ ಸೇನೆ ಉಗ್ರರು ಗ್ರಾಮದ ಮುಖ್ಯಸ್ಥನ ಹತ್ಯೆ, ಸ್ಥಳೀಯ ನಿವಾಸಿಗಳ ಬೆದರಿಕೆ ಮತ್ತು ಪ್ರದೇಶದಲ್ಲಿ ಶಾಂತಿಯನ್ನು ಭಂಗಗೊಳಿಸುವ ಪ್ರಯತ್ನಗಳು ಸೇರಿದಂತೆ ಹಲವಾರು ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದರು. ಇದರ ನಂತರ ಸೇನೆ ಈ ಕಾರ್ಯಾಚರಣೆ ನಡೆಸಿದೆ.
ಈ ಕಾರ್ಯಾಚರಣೆಯು ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ನಾಗರಿಕರ ಸುರಕ್ಷತೆಗೆ ತಮ್ಮ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಸೇನೆ ಮತ್ತು ಅಸ್ಸಾಂ ರೈಫಲ್ಸ್ ತಿಳಿಸಿದೆ. ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪ್ರಸ್ತುತ ಶೋಧ ಕಾರ್ಯಾಚರಣೆಗಳು ನಡೆಯುತ್ತಿದೆ ಎನ್ನಲಾಗಿದೆ.

































