ಉಡುಪಿ: ವೈದ್ಯಕೀಯ ವಿದ್ಯಾಭ್ಯಾಸ ನಡೆಸಲು ಸೀಟ್ ದೊರಕಿಸಿಕೊಡುವುದಾಗಿ ನಂಬಿಸಿ ವೈದ್ಯಕೀಯ ವಿದ್ಯಾರ್ಥಿಯೊಬ್ಬನನ್ನು ವಂಚಿಸಿದ ಘಟನೆ ಸಂಭವಿಸಿದೆ. ಬೆಂಗಳೂರು ಮೂಲದ ಸಂತೋಷ್ ಅವರು ವೈದ್ಯ ವಿದ್ಯಾಭ್ಯಾಸ ಮುಗಿಸಿಕೊಂಡು ಎಂಪಿಎಚ್ ವಿದ್ಯಾಭ್ಯಾಸವನ್ನು ಯುಕೆಯಲ್ಲಿ ಮಾಡಲು ಉದ್ದೇಶಿಸಿದ್ದರು.
ಅದರಂತೆ ಅವರ ಪರಿಚಯದ ಡಾ। ಸುದರ್ಶನ್ ಅವರಿಗೆ ಕರೆ ಮಾಡಿ ವಿಚಾರಿಸಿದಾಗ ದುಬೈನಲ್ಲಿರುವ ಆರೋಪಿ ಅಫ್ತಾಬ್ ಅವರನ್ನು ಭೇಟಿ ಮಾಡುವಂತೆ ತಿಳಿಸಿದ್ದು, ಅದರಂತೆ ಸಂತೋಷ್ ಅವರು ದುಬೈಗೆ ತೆರಳಿ ಅಫ್ತಾಬ್ ಅವರನ್ನು ಭೇಟಿ ಮಾಡಿದ್ದರು. ಅನಂತರ ಯುಕೆಯಲ್ಲಿ ವಿದ್ಯಾಭ್ಯಾಸಕ್ಕಾಗಿ ಸೀಟಿಗೆ 18 ಲ.ರೂ.ಗೆ ಇಬ್ಬರ ನಡುವೆ ಒಪ್ಪಂದವಾಯಿತು. ಅಫ್ತಾಬ್ ಸಂತೋಷ್ ಅವರಿಗೆ ಕರೆ ಮಾಡಿ ವಿದ್ಯಾಭ್ಯಾಸಕ್ಕಾಗಿ ಸೀಟನ್ನು ಖಾಯಂ ಮಾಡಲು ಮೊದಲಿಗೆ 8.5 ಲ.ರೂ. ನೀಡುವಂತೆ ಕೇಳಿದ್ದರು. ಅದರಂತೆ ಸಂತೋಷ್ ಅವರಲ್ಲಿ ಎನ್‌ಆರ್‌ಐ ಖಾತೆಯನ್ನು ಹೊಂದಿರದ ಕಾರಣ ಹಣವನ್ನು ಜಮೆ ಮಾಡಲು ಅಫ್ತಾಬ್ ಆತನಿಗೆ ಪರಿಚಯವಿರುವ 2ನೇ ಆರೋಪಿ ಸುಮನ್ ಎಸ್. ಅವರನ್ನು ಭೇಟಿ ಆಗುವಂತೆ ತಿಳಿಸಿದ್ದನು. ಸುಮನ್ ಅವರ ಬನ್ನಂಜೆಯ ಬ್ಯಾಂಕ್ ಆಪ್ ಬರೋಡ ಶಾಖೆಯ ಖಾತೆಗೆ ಬೆಂಗಳೂರಿನಲ್ಲಿರುವ ನಂದಿನಿ ಲೇಔಟ್ ಆ್ಯಕ್ಸಿಸ್ ಬ್ಯಾಂಕ್ ಶಾಖೆಯಿಂದ ಆರ್ ಟಿಜಿಎಸ್ ಮುಖಾಂತರ 8.5 ಲ.ರೂ.ಗಳನ್ನು ವರ್ಗಾವಣೆ ಮಾಡಿದ್ದರು. ಬಳಿಕ ಆರೋಪಿಗಳು ಸಂತೋಷ್ ಅವರ ಕರೆಯನ್ನು ಸ್ವೀಕರಿಸದೇ ಸಂತೋಷ್ ಅವರಿಗೆ ವಂಚನೆ ಎಸಗಿದ್ದಾರೆ ಎಂದು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.