ಬೆಂಗಳೂರಿನ ಹೆಮ್ಮೆಯ ‘ಏರೋ ಇಂಡಿಯಾ 2025’ ಏರ್ ಶೋಗೆ ದಿನಗಣನೆ ಆರಂಭವಾಗಿದ್ದು, ಈಗಾಗಲೇ ಯಲಹಂಕ ವಾಯುನೆಲೆಯಲ್ಲಿ ಸಿದ್ಧತೆಗಳು ಭರದಿಂದ ಸಾಗಿವೆ. ಬೆಂಗಳೂರು ಏರ್ ಶೋ ಏಷ್ಯಾದಲ್ಲೇ ಅತ್ಯಂತ ದೊಡ್ಡ ಏರ್ ಶೋ ಎಂಬ ಹೆಗ್ಗಳಿಕೆ ಹೊಂದಿದೆ. 15ನೇ ಆವೃತ್ತಿಯ ಏರ್ ಶೋಗೆ ದೇಶ ವಿದೇಶಗಳಿಂದ ಲಕ್ಷಾಂತರ ಜನ ಬರಲಿದ್ದಾರೆ.
ಕರ್ನಾಟಕದ ಜನರು ಕೂಡ ಏರ್ ಶೋ ನೋಡಲು ಸಾವಿರಾರು ಸಂಖ್ಯೆಯಲ್ಲಿ ಬರುವುದರಿಂದ ಟ್ರಾಫಿಕ್ ಜಾಮ್ ಆಗುವುದು ಮಾಮೂಲಿ. ಈಗ ಟ್ರಾಫಿಕ್ ಸಮಸ್ಯೆ ಕಡಿಮೆ ಮಾಡುವ ಉದ್ದೇಶದಿಂದ ಯಲಹಂಕ ವಾಯುನೆಲೆಗೆ ಸ್ವಂತ ವಾಹನದಲ್ಲಿ ಬರುವವರಿಗೆ ಜಿಕೆವಿಕೆಯಲ್ಲೇ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಮಾಡಿಸಿ, ಅಲ್ಲಿಂದ ಬಿಎಂಟಿಸಿ ಬಸ್ ಮೂಲಕ, ಹುಣಸೆ ಮಾರನಹಳ್ಳಿ ಬಳಿ ಇರುವ ಯಲಹಂಕ ವಾಯನೆಲೆಗೆ ಉಚಿತವಾಗಿ ಕರೆದೊಯ್ಯಲು ಬಿಎಂಟಿಸಿ ಬಸ್ ವ್ಯವಸ್ಥೆ ಮಾಡಲಾಗಿದೆ. ಈ ಬಗ್ಗೆ ಏರ್ ಶೋಗೆ ಹೋಗಲು ಉದ್ದೇಶಿಸಿರುವ ಸಾರ್ವಜನಿಕರು ಸಂತಸ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಬಿಎಂಟಿಸಿಯಿಂದ 180 ಬಸ್ಗಳನ್ನು ವಾಯಸೇನೆ ಬುಕ್ ಮಾಡಿದೆ. ಜಿಕೆವಿಕೆಯಿಂದ ಮಾತ್ರವಲ್ಲದೇ, ಯಾರೆಲ್ಲ ಏರ್ ಶೋಗೆ ಟಿಕೆಟ್ ಬುಕ್ ಮಾಡಿಕೊಂಡಿರುತ್ತಾರೋ ಅವರಿಗೆ ಬೆಂಗಳೂರಿನ 10 ಪ್ರಮುಖ ಸ್ಥಳಗಳಿಂದಲೂ ಬಸ್ ವ್ಯವಸ್ಥೆ ಮಾಡಿಸಲು ಮುಂದಾಗಿದ್ದಾರೆ. ಇದರಿಂದ ಏರ್ ಶೋಗೆ ಬರುವವರಿಗೆ ತುಂಬಾ ಸಹಾಯ ಆಗಲಿದೆ ಮತ್ತು ಏರ್ಪೋರ್ಟ್ ರೋಡ್ನಲ್ಲಿ ಟ್ರಾಫಿಕ್ ಜಾಮ್ ಆಗುವುದು ತಪ್ಪಲಿದೆ ಎಂಬ ಅಭಿಪ್ರಾಯ ಸಾರ್ವಜನಿಕರಿಂದಲೂ ವ್ಯಕ್ತವಾಗಿದೆ.
ಒಟ್ಟಿನಲ್ಲಿ ಭಾರಿ ಸಂಚಾರ ದಟ್ಟಣೆ ಇರುವ ಏರಿಯಾ ಆಗಿರುವ ಹೆಬ್ಬಾಳ ಮಾರ್ಗದ ವಾಹನ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಈ ರೀತಿ ಸಾರ್ವಜನಿಕ ಬಸ್ ವ್ಯವಸ್ಥೆ ಮಾಡಲಾಗುತ್ತಿದೆ. ಈ ಬಗ್ಗೆ ಹೆಬ್ಬಾಳ ಟ್ರಾಫಿಕ್ ಪೊಲೀಸರು, ಮತ್ತು ಎಸಿಪಿ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಳ್ಳುವ ಮೂಲಕವೂ ಸಾರ್ವಜನಿಕ ಬಸ್ ಸೇವೆಯ ಬಳಕೆ ಬಗ್ಗೆ ಮಾಹಿತಿ ನೀಡಿದ್ದಾರೆ. ಅಲ್ಲದೆ, ಉಚಿತ ಬಸ್ ವ್ಯವಸ್ಥೆಯ ಸದ್ಭಳಕೆ ಮಾಡಿಕೊಳ್ಳುವಂತೆ ಮನವಿ ಮಾಡಿದ್ದಾರೆ.
				
															
                    
                    
                    
                    
                    
































