ಮಂಗಳೂರು: ಎಂಜಿನಿಯರಿಂಗ್ ಸಹಿತ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶ ಸಂಬಂಧ ಎಪ್ರಿಲ್ 15, 16 ಮತ್ತು 17ರಂದು ಸಾಮಾನ್ಯ ಪ್ರವೇಶ ಪರೀಕ್ಷೆ- ಸಿಇಟಿ ನಡೆಯಲಿದೆ.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಂದ ಒಟ್ಟು 30,614 ಮಂದಿ ಪರೀಕ್ಷೆಗೆ ನೊಂದಾಯಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಿಂದ 22,525 ಮಂದಿ ಹಾಗೂ ಉಡುಪಿ ಜಿಲ್ಲೆಯ 8,089 ವಿದ್ಯಾರ್ಥಿಗಳು ನೋಂದಣಿ ಮಾಡಿಸಿಕೊಂಡಿದ್ದಾರೆ. ಇಂದು ಆಯ್ದ ಕೇಂದ್ರಗಳಲ್ಲಿ ಮಾತ್ರ ಗಡಿನಾಡು- ಹೊರನಾಡು ವಿದ್ಯಾರ್ಥಿಗಳಿಗೆ ಕನ್ನಡ ಭಾಷಾ ಪರೀಕ್ಷೆ ನಡೆಯಲಿದೆ. ಎಪ್ರಿಲ್ 16 ಮತ್ತು 17 ರಂದು ಮುಖ್ಯ ವಿಷಯಗಳ ಪರೀಕ್ಷೆ ನಡೆಯಲಿದೆ. ಕನ್ನಡ ಭಾಷಾ ಪರೀಕ್ಷೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 655 ಮಂದಿ ನೋಂದಣಿ ಮಾಡಿದ್ದಾರೆ. ವೆಬ್ ಕಾಸ್ಟಿಂಗ್ ಇರಲಿದೆ. ಪರೀಕ್ಷಾ ಕೇಂದ್ರಗಳ ಸುತ್ತ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಪರೀಕ್ಷೆಯ ಸಂದರ್ಭ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗದಂತೆ ಎಚ್ಚರ ವಹಿಸುವಂತೆ ಮೆಸ್ಕಾಂ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ.