ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ಸಾಮೂಹಿಕವಾಗಿ ಶವಗಳನ್ನ ಹೂಳಲಾಗಿದೆ ಎಂದು ಅದಕ್ಕೆ ಸಾಕ್ಷಿಯಾಗಿ ಮಾಸ್ಕ್ ಮ್ಯಾನ್ ಅಲಿಯಾಸ್ ಚಿನ್ನಯ್ಯ ತಂದ ತಲೆ ಬುರುಡೆ 30 ರಿಂದ 35 ವರ್ಷದ ಪುರುಷನದ್ದು, ಎಂದು ಎಫ್‌ಎಸ್‌ಎಲ್ ವರದಿಯಿಂದ ಬಹಿರಂಗವಾಗಿದೆ.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಸ್ಕ್ ಮ್ಯಾನ್ ಚಿನ್ನಯ್ಯ ಎಸ್‌ಐಟಿ ತನಿಖೆ ಎದುರಿಸುತ್ತಿದ್ದಾನೆ. ಈ ನಡುವೆ ಧರ್ಮಸ್ಥಳ ವಿರೋಧಿ ಹೋರಾಟಗಾರ ಮಹೇಶ್ ತಿಮರೋಡಿ ಮನೆಯಲ್ಲಿ ಚಿನ್ನಯ್ಯನ ಮೊಬೈಲ್ ಪತ್ತೆಯಾಗಿದ್ದು, ಸರ್ಚ್ ವಾರೆಂಟ್ ಪಡೆದ ಎಸ್‌ಐಟಿ ಅಧಿಕಾರಿಗಳು ಮನೆಯನ್ನಿಡೀ ತಲಾಶೆಗೆ ಒಳಪಡಿಸಿದ್ದಾರೆ. ಈ ವೇಳೆ ಬಟ್ಟೆಗಳು ಸೇರಿದಂತೆ ಸಂಶಯಾಸ್ಪದ ಹಾಗೂ ತನಿಖೆಗೆ ಪೂರಕವಾದ ವಸ್ತುಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.