ನವದೆಹಲಿ : ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ಅಂತ್ಯಕ್ರಿಯೆ ಶನಿವಾರ ನಡೆಯಲಿದ್ದು, ಶುಕ್ರವಾರ ಅಧಿಕೃತ ಘೋಷಣೆಯಾಗುವ ನಿರೀಕ್ಷೆಯಿದೆ.
“ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ಅಂತಿಮ ಸಂಸ್ಕಾರ ನಾಳೆಯ ದಿನ ನಡೆಯಲಿದೆ. ನಾವು ಅಧಿಕೃತವಾಗಿ ಘೋಷಿಸುತ್ತೇವೆ…” ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಗುರುವಾರ ತಡರಾತ್ರಿ ದೆಹಲಿಯಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಡಾ. ಮನಮೋಹನ್ ಸಿಂಗ್ ಅವರು ಕಾಂಗ್ರೆಸ್ ಮತ್ತು ದೇಶದ ನಿಜವಾದ ಐಕಾನ್ ಆಗಿದ್ದರು. ಸ್ವಾತಂತ್ರ್ಯ ನಂತರದ ಹೀರೋ. ಅವರ ಧ್ಯೇಯ ಮತ್ತು ದೇಶವನ್ನು ಆಳುವ ಸಾಮರ್ಥ್ಯ ಎಲ್ಲರಿಗೂ ಸಾಕ್ಷಿಯಾಗಿದೆ…” ಎಂದು ವೇಣುಗೋಪಾಲ್ ಹೇಳಿದರು.
ಡಿಸೆಂಬರ್ 28 ರಂದು ನಡೆಯಲಿರುವ ಕಾಂಗ್ರೆಸ್ ಸಂಸ್ಥಾಪನಾ ದಿನ ಸೇರಿದಂತೆ ಏಳು ದಿನಗಳ ಕಾಲ ಕಾಂಗ್ರೆಸ್ ನ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ ಎಂದು ಹೇಳಿದರು. ಮನಮೋಹನ್ ಸಿಂಗ್ ಅವರ ಪಾರ್ಥಿವ ಶರೀರವನ್ನು ಏಮ್ಸ್ ನಿಂದ ಗುರುವಾರ ತಡರಾತ್ರಿ 3 ಮೋತಿಲಾಲ್ ನೆಹರು ಮಾರ್ಗದಲ್ಲಿರುವ ಅವರ ನಿವಾಸಕ್ಕೆ ತಲುಪಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಗುವುದು.
ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಹಿರಿಯ ಕಾಂಗ್ರೆಸ್ ನಾಯಕರು ಡಾ ಸಿಂಗ್ ಅವರ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕರ್ನಾಟಕದ ಬೆಳಗಾವಿಯಿಂದ ದೆಹಲಿಗೆ ಹಿಂತಿರುಗಿ ಗೌರವ ಸಲ್ಲಿಸಿದರು.