ಧಾರವಾಡ : ಗಣೇಶ ಹಬ್ಬ ಹಾಗೂ ಈದ್-ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ, ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಹಿತದೃಷ್ಠಿಯಿಂದ ಮದ್ಯಪಾನ, ಮದ್ಯ ಮಾರಾಟ ಮತ್ತು ಮದ್ಯ ಸಾಗಾಣಿಕೆಯನ್ನು ಧಾರವಾಡ ಜಿಲ್ಲೆಯಾದ್ಯಂತ (ಹುಬ್ಬಳ್ಳಿ-ಧಾರವಾಡ ಮಹಾನಗರ ಹೊರತು ಪಡಿಸಿ) ನಿಷೇಧಿಸಿ ಜಿಲ್ಲಾ ದಂಡಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಆಜ್ಞೆ ಹೊರಡಿಸಿದ್ದಾರೆ.
ಈ ಕುರಿತು ಆದೇಶಿಸಿರುವ ಅವರು, ಧಾರವಾಡ ಜಿಲ್ಲೆಯಾದ್ಯಂತ (ಹುಬ್ಬಳ್ಳಿ-ಧಾರವಾಡ ಮಹಾನಗರ ಹೊರತು ಪಡಿಸಿ) ಆ.26 ರ ರಾತ್ರಿ 11.59 ಗಂಟೆಯಿಂದ ಆ.28 ರ ಬೆಳಿಗ್ಗೆ 6 ಗಂಟೆಯವರೆಗೆ ಮತ್ತು ಆ. 28 ರ ರಾತ್ರಿ 11.59 ಗಂಟೆಯಿಂದ ಆ. 30 ರ ಬೆಳಿಗ್ಗೆ 6 ಗಂಟೆಯವರಗೆ ಹಾಗೂ ಆ.30 ರ ರಾತ್ರಿ 11.59 ಗಂಟೆಯಿಂದ ಸೆ. 1 ರ ಬೆಳಿಗ್ಗೆ 6 ಗಂಟೆಯವರೆಗೆ, ಸೆ.1 ರ ರಾತ್ರಿ 11.59 ಗಂಟೆಯಿಂದ ಸೆ. 3 ರ ಬೆಳಿಗ್ಗೆ 6 ಗಂಟೆಯವರಗೆ ಹಾಗೂ ಸೆ. 3 ರ ರಾತ್ರಿ 11.59 ಗಂಟೆಯಿಂದ ಸೆ.7 ಬೆಳಿಗ್ಗೆ 6 ಗಂಟೆಯವರಗೆ ಮದ್ಯಪಾನ, ಮದ್ಯ ಮಾರಾಟ ಮತ್ತು ಮದ್ಯ ಸಾಗಾಣಿಕೆಯನ್ನು ನಿಷೇಧಿಸಿ, ಆದೇಶಿಸಲಾಗಿದೆ.
ಆದ್ದರಿಂದ ಯಾವತ್ತೂ ಭಾರತೀಯ ತಯಾರಿಕೆ ಮದ್ಯದ ಅಂಗಡಿಗಳು, ಬೀರ್ ಬಾರ್ಗಳು, ಕ್ಲಬ್ಗಳನ್ನು ಈ ನಿಷೇಧಾಜ್ಞೆ ಜಾರಿಯಲ್ಲಿರುವ ಅವಧಿಯಲ್ಲಿ ಮುಚ್ಚಿಸತಕ್ಕದ್ದು.ಇದಲ್ಲದೇ ಪರಿಸ್ಥಿತಿಗೆ ಅನುಗುಣವಾಗಿ ಸಾರ್ವಜನಿಕ ಶಾಂತತೆಯನ್ನು ಕಾಯ್ದುಕೊಂಡು ಬರುವ ಹಿತದೃಷ್ಟಿಯಿಂದ ಜಿಲ್ಲೆಯ ಅಬಕಾರಿ ಇಲಾಖೆಯ ಅಧಿಕಾರಿಗಳು ಕರ್ನಾಟಕ ಅಬಕಾರಿ ಕಾಯ್ದೆ- 1965ರ ಕಲಂ 21(2) ರ ಅನ್ವಯ ಅವಶ್ಯಕತೆ ಕಂಡುಬಂದಲ್ಲಿ, ಶಾಂತಿ ಪಾಲನೆಗಾಗಿ ಸೂಕ್ತ ಕ್ರಮಕೈಗೊಳ್ಳಬೇಕೆಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ.
ಧಾರವಾಡ ಅಬಕಾರಿ ಉಪ ಆಯುಕ್ತರು, ಧಾರವಾಡ ಆರಕ್ಷಕ ಅಧೀಕ್ಷಕರು ಹಾಗೂ ಧಾರವಾಡ ಜಿಲ್ಲೆಯ ಹೆಚ್ಚುವರಿ ಅಬಕಾರಿ ಅಧೀಕ್ಷಕರು ಮತ್ತು ಹುಬ್ಬಳ್ಳಿ ಅಬಕಾರಿ ಉಪ ಅಧೀಕ್ಷಕರು (ವಿಚಕ್ಷಕ ದಳ) ಇವರು ತಮ್ಮ ವ್ಯಾಪ್ತಿಯಲ್ಲಿ ಈ ಆದೇಶವನ್ನು ಪರಿಣಾಮಕಾರಿಯಾಗಿ ಜಾರಿಗೆ ಬರುವಂತೆ ಕ್ರಮ ಜರುಗಿಸಬೇಕು ಎಂದು ಜಿಲ್ಲಾ ದಂಡಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದ್ದಾರೆ.