ಕರ್ನಾಟಕದ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಗಣೇಶ ಹಬ್ಬಕ್ಕೆ ಭರ್ಜರಿ ತಯಾರಿ ನಡೆದಿದೆ. ಇಂದು ಗೌರಿ ಹಬ್ಬವನ್ನು ಶ್ರದ್ಧಾ-ಭಕ್ತಿಯಿಂದ ಆಚರಿಸಲಾಗುತ್ತಿದ್ದು, ನಾಳೆ ಗಣೇಶ ಹಬ್ಬಕ್ಕಾಗಿ ತಯಾರಿ ಬರದಿಂದ ಸಾಗಿದೆ.
ಈ ನಡುವೆ ಬೆಳಗಾವಿಯಾದ್ಯಂತ ಮದ್ಯ ಮಾರಾಟ ನಿಷೇಧಿಸಲಾಗಿದೆ. ಬೆಳಗಾವಿ ತಾಲೂಕಿನಾದ್ಯಂತ ಸಾರ್ವಜನಿಕ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಬೆಳಗಾವಿ ಕಮೀಷನರೇಟ್ ವ್ಯಾಪ್ತಿ, ಬೆಳಗಾವಿ ತಾಲೂಕಿನಾದ್ಯಂತ ಮದ್ಯ ಮಾರಾಟ ನಿಷೇಧಿಸಲಾಗಿದೆ. ಆಗಸ್ಟ್ 27 ರಿಂದ ಸೆಪ್ಟೆಂಬರ್ 6ವರೆಗೆ 11 ದಿನಗಳ ಕಾಲ ಗಣೇಶ ಉತ್ಸವ ನಡೆಯಲಿದ್ದು, ಯಾವುದೇ ಅಹೀತಕರ ಘಟನೆ ನಡೆಯದಂತೆ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಹೀತದೃಷ್ಟಿಯಿಂದ ಮುಂಜಾಗೃತಾ ಕ್ರಮವಾಗಿ ಇಂದು ಮಧ್ಯರಾತ್ರಿಯಿಂದ ಆಗಸ್ಟ್ 28ರಂದು ಬೆಳಗ್ಗೆ 6 ಗಂಟೆಯವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ.
ಅದೇ ರೀತಿಯಲ್ಲಿ ಸೆಪ್ಟೆಂಬರ್ 6 ರಂದು ಶ್ರೀ ಗಣೇಶ ಮೂರ್ತಿಗಳ ವಿಸರ್ಜನೆ ಕಾಲಕ್ಕೆ ಸೆಪ್ಟೆಂಬರ್ 5 ರಂದು ಸಾಯಂಕಾಲ 6 ಗಂಟೆಯಿಂದ ಸೆ.8 ರಂದು ಬೆಳಿಗ್ಗೆ 6 ಗಂಟೆಯವರೆಗೆ ಮದ್ಯದ ಅಂಗಡಿ, ವೈನಶಾಪ್, ಬಾರ್‌ಗಳಲ್ಲಿ, ಕ್ಲಬ್‌ಗಳಲ್ಲಿ ಮತ್ತು ಹೊಟೇಲ್ ಗಳಲ್ಲಿ ಮದ್ಯ ಮಾರಾಟ ಮತ್ತು ಮದ್ಯ ಸಾಗಣಿಕೆಯನ್ನು ನಿಷೇಧಿಸಲಾಗಿದೆ. ಮದ್ಯದ ಅಂಗಡಿಗಳನ್ನು ಹಾಗೂ ಕೆಎಸ್‌ಬಿಸಿಎಲ್ ಡಿಪೋಗಳನ್ನು, ಹೊಟೇಲ್‌ಗಳಲ್ಲಿರುವ ಬಾರ್ಗಗಳನ್ನು ಮುಚ್ಚುವಂತೆ ಜಿಲ್ಲಾಧಿಕಾರಿಗಳು ಹಾಗೂ ಬೆಳಗಾವಿ ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.