ಸ್ಯಾಂಟಿಯಾಗೊ: ಜಗತ್ತಿನಲ್ಲಿ ಪ್ರತಿ ದಿನವೂ ಸಾಕಷ್ಟು ಭಯಾನಕ ಘಟನೆಗಳು ಸಂಭವಿಸುತ್ತವೆ. ಕೆಲವು ದೃಶ್ಯಗಳು ಇಂದು ಸಾಮಾಜಿಕ ಜಾಲತಾಣದಲ್ಲಿ ಕಾಣ ಸಿಗುವುದರಿಂದ ನೋಡುವಾಗಲೇ ಆತಂಕವಾಗುತ್ತದೆ. ಮತ್ತಷ್ಟು ವಿಡಿಯೊಗಳು ವಿಸ್ಮಯ ಎನಿಸುತ್ತವೆ. ಇದೀಗ ಚಿಲಿ ದೇಶದ ಪ್ಯಾಟಗೋನಿಯಾದಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದೆ. ಸಮುದ್ರವೊಂದರಲ್ಲಿ ಕಾಯ್ಕಿಂಗ್ ಮಾಡುತ್ತಿದ್ದ ಹುಡುಗನೊಬ್ಬನನ್ನು ದೈತ್ಯಾಕಾರದ ವೇಲ್ ಮೀನೊಂದು ಕ್ಷಣ ಮಾತ್ರದಲ್ಲೇ ನುಂಗಿ ಹಾಕಿದೆ. ತಂದೆಯ ಎದುರೇ ಮಗನನ್ನು ದೈತ್ಯ ಮೀನು ನುಂಗಿದ್ದು, ನಂತರ ಏನೂ ಹಾನಿ ಮಾಡದೆ ಬಾಯಿಯಿಂದ ಹೊರಕ್ಕೆ ಉಗುಳಿದೆ. ಹುಡುಗ ಪ್ರಾಣಾಪಾಯದಿಂದ ಬಚಾವಾಗಿದ್ದಾನೆ. ಘಟನೆಯ ಭಯಾನಕ ವಿಡಿಯೊ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.
ಆಡ್ರಿಯನ್ ಸಿಮಾನ್ಕಾಸ್ ಎಂಬ ಹುಡುಗ ತನ್ನ ತಂದೆ ಡೆಲ್ ಜೊತೆ ಮೆಗೆಲ್ಲನ್ ಜಲಸಂಧಿಯ ಬಳಿ ಇರುವ ಬಹಿಯಾ ಎಲ್ ಅಗುಲಾದಲ್ಲಿ ಸಂಭ್ರಮದಿಂದ ಕಾಯ್ಕಿಂಗ್ ಮಾಡಿದ್ದಾನೆ. ಪೂರಾ ಜೋಶ್ನಲ್ಲಿದ್ದ ಹುಡುಗನನ್ನು ಬೃಹದಾಕಾರದ ಮೀನು ನುಂಗಿ ಹಾಕಿದೆ. ಅಷ್ಟೇ ಅಲ್ಲದೆ ಅವನು ನಡೆಸುತ್ತಿದ್ದ ಹಳದಿ ಬಣ್ಣದ ಕಾಯ್ಕಿಂಗ್ ದೋಣಿಯನ್ನೂ ಮೀನು ನುಂಗಿದೆ. ಮಗನಿಗೆ ಧೈರ್ಯ ಹೇಳುತ್ತಲೇ, ಭೀಕರ ದೃಶ್ಯವನ್ನು ಆತನ ತಂದೆ ತಮ್ಮ ಮೊಬೈಲ್ ಫೋನ್ನಲ್ಲಿ ಸೆರೆ ಹಿಡಿದಿದ್ದು, ವಿಡಿಯೊ ಇದೀಗ ಎಲ್ಲೆಡೆ ಹರಿದಾಡುತ್ತಿದೆ
“ಧೈರ್ಯವಾಗಿರು..ಧೈರ್ಯವಾಗಿರು” ಎಂದು ತಂದೆ ಆಡ್ರಿಯನ್ಗೆ ಧೈರ್ಯ ತುಂಬುತ್ತಲೇ ವಿಡಿಯೊ ಮಾಡಿದ್ದಾರೆ. ಕೆಲವು ನಿಮಿಷಗಳ ನಂತರ ಮೀನು ಯಾವುದೇ ಹಾನಿ ಮಾಡದೆ ಬಿಟ್ಟಿದೆ. ಸುದ್ದಿಗಾರರೊಂದಿಗೆ ಮಾತನಾಡಿರುವ ಆಡ್ರಿಯನ್, ನಾನು ಸತ್ತೇ ಹೋದೆ ಎಂದು ಭಾವಿಸಿದ್ದೆ. ಕೆಲ ಹೊತ್ತು ಉಸಿರು ನಿಂತತಾಯ್ತು. ಸದ್ಯ ಏನೂ ಮಾಡದೆ ಬಿಟ್ಟಿತು. ಮೀನು ನನ್ನ ತಂದೆಯನ್ನೂ ನುಂಗಿ ಹಾಕುತ್ತದೆ ಎಂದು ಹೆದರಿದ್ದೆ. ಇದು ವಿಸ್ಮಯ ಮತ್ತು ಬದುಕಿನಲ್ಲಿ ಮರೆಯಲಾದ ಅನುಭವ” ಎಂದಿದ್ದಾನೆ.
ನಂತರ ತಂದೆ ಮಗ ಇಬ್ಬರೂ ಸುರಕ್ಷಿತವಾಗಿ ದಡ ಸೇರಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಬೆಚ್ಚಿ ಬಿದ್ದಿದ್ದಾರೆ. ವಿಡಿಯೊವನ್ನು ಲಕ್ಷಾಂತರ ಜನ ಶೇರ್ ಮಾಡಿದ್ದಾರೆ.