ರಾಜ್ಯದ ಪ್ರತಿಷ್ಠಿತ ದೇವಾಲಯಗಳ ಪ್ರಸಾದವನ್ನು ಮನೆಬಾಗಿಲಿಗೆ ತಲುಪಿಸುವ ಇ-ಪ್ರಸಾದ ಸೇವೆಗೆ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಚಾಲನೆ ನೀಡಿದ್ದಾರೆ.
ಶಾಂತಿನಗರದ ಸಾರಿಗೆ ಆಯುಕ್ತರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ರಾಜ್ಯದ ಇತಿಹಾಸ ಪ್ರಸಿದ್ದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಸಹಿತ ರಾಜ್ಯದ 14 ದೇವಾಲಯಗಳನ್ನು ಆಯ್ಕೆ ಮಾಡಿ ಪ್ರಾಯೋಗಿಕ ಪ್ರಸಾದ ಸೇವೆಗೆ ಚಾಲನೆ ನೀಡಲಾಗಿದೆ. ಮುಜರಾಯಿ ಇಲಾಖೆಯ ಪ್ರಮುಖ ದೇವಾ ಲಯಗಳ ಪ್ರಸಾದವನ್ನು ಭಕ್ತರ ಮನೆಬಾಗಿಲಿಗೆ ಸಿಎಸ್‌ಸಿ ಇ-ಗವರ್ನೆನ್ಸ್ ಸರ್ವೀಸ್ ಇಂಡಿಯಾ ಲಿಮಿಟೆಡ್ CSC e-Governance Services India Limited ಸಹಯೋಗದೊಂದಿಗ ಅನುಷ್ಠಾನಗೊಳಿಸಿ ಜಾರಿಗೆ ತರಲಾಗುತ್ತಿದೆ.
ಈ ದೇವಾಲಯಗಳಲ್ಲಿ ಕಲ್ಲುಸಕ್ಕರೆ, ಬಾದಾಮಿ, ಗೋಡಂಬಿ, ದ್ರಾಕ್ಷಿ, ಭಸ್ಮ, ಕುಂಕುಮ, ಬಿಲ್ವಪತ್ರೆ, ಹೂವು, ತುಳಸಿ ಮತ್ತು ದೇವಾಲಯದ ಸ್ತೋತ್ರ ಗಳನ್ನು ತರಿಸಿಕೊಳ್ಳಬಹುದು.ಬೆಂಗಳೂರು ಜಯನಗರದ ಶ್ರೀ ವಿನಾಯಕಸ್ವಾಮಿ ದೇವಾಲಯ, ಗವಿಪುರದ ಶ್ರೀ ಗವಿಗಂಗಾಧರೇಶ್ವರ ಸ್ವಾಮಿ ದೇವಾಲಯ, ಹಲಸೂರಿನ ಶ್ರೀ ಸೋಮೇಶ್ವರ ಸ್ವಾಮಿ ದೇವಾಲಯ, ಮಂಡ್ಯದ ಮೇಲುಕೋಟೆಯ ಶ್ರೀ ಚಲುವನಾರಾಯಣ ಸ್ವಾಮಿ ದೇವಾಲಯ, ಮೈಸೂರು ನಂಜನಗೂಡಿನ ಶ್ರೀ ಶ್ರೀಕಂಠೇಶ್ವರ ಸ್ವಾಮಿ ದೇವಾಲಯ, ಕೋಲಾರದ ಮಾಲೂರಿನ ಶ್ರೀ ಪ್ರಸನ್ನ ವೆಂಕಟರಮಣ ಸ್ವಾಮಿ ದೇವಾಲಯ, ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಾಲಯ, ಬೀದರ್‌ನ ಶ್ರೀ ಕ್ಷೇತ್ರ ಝರಣಿ ನರಸಿಂಹ ದೇವಸ್ಥಾನ, ಬೆಳಗಾವಿ ಯಲ್ಲಮ್ಮನ ಗುಡ್ಡದ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನ, ದಕ್ಷಿಣ ಕನ್ನಡದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ಬಳ್ಳಾರಿಯ ಶ್ರೀ ಕನಕ ದುರ್ಗಮ್ಮ ದೇವಸ್ಥಾನ, ವಿಜಯನಗರದ ಹೂವಿನಹಡಗಲಿಯ ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನ, ಕೊಪ್ಪಳದ ಹುಲಿಗಿಯ ಶ್ರೀ ಹುಲಿಗೆಮ್ಮ ದೇವಾಲಯ, ಕಲಬುರಗಿಯ ಗಾಣಗಾಪುರದ ಶ್ರೀ ಗುರುದತ್ತಾತ್ರೇಯ ಸ್ವಾಮಿ ದೇವಾಲಯ ಇವುಗಳ ಪ್ರಸಾದ ಆನ್‌ಲೈನ್‌ನಲ್ಲಿ ಸಿಗಲಿದೆ. ಅನೇಕ ದೇವಾಲಯಗಳು ಹಣೆಗೆ ಹಚ್ಚಿಕೊಳ್ಳುವ ಕುಂಕುಮ, ಗಂಧ ಇತ್ಯಾದಿ ಪ್ರಸಾದವನ್ನು ಅಂಚೆ ಅಥವಾ ಕೊರಿಯರ್ ಮೂಲಕ ಕಳುಹಿಸುವ ವ್ಯವಸ್ಥೆಯನ್ನು ಬಹಳ ಹಿಂದೆಯೇ ಮಾಡಿಕೊಂಡಿದ್ದವು. ಆದರೆ ಮುಜರಾಯಿ ಇಲಾಖೆ ಈಗ ತಿನ್ನುವ ಪ್ರಸಾದವನ್ನು ಮನೆ ಬಾಗಿಲಿಗೆ ತಲುಪಿಸಲಿದೆ.