ಬೆಂಗಳೂರು: ಶಿಕ್ಷಕ ಹುದ್ದೆ ಆಕಾಂಕ್ಷಿಗಳಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಈ ಬಗ್ಗೆ ನಗರದ ಕ್ವೀನ್ಸ್ ರಸ್ತೆಯಲ್ಲಿನ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದು, ಸರ್ಕಾರಿ ಶಾಲೆಗಳಲ್ಲಿ ಕೆಲ ಮೂಲಭೂತ ಸೌಕರ್ಯಗಳ ಅಭಾವವಿರುವುದು ನಿಜ, ಈ ಸಮಸ್ಯೆಯನ್ನು ಹಂತ-ಹಂತವಾಗಿ ಬಗೆಹರಿಸಲಾಗುವುದು. ಹಾಗೆಯೇ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ (Teachers Recruitment) ಕೊರತೆಯಿದ್ದು, ಶೀಘ್ರವೇ ರಾಜ್ಯದಲ್ಲಿ 19,000 ಶಿಕ್ಷಕರ ನೇಮಕಾತಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಒಳ ಮೀಸಲಾತಿ ಸಂಬಂಧ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಸಮಿತಿಯು ವರದಿ ನೀಡಿದ ಬಳಿಕ 19 ಸಾವಿರ ಶಿಕ್ಷಕರ ನೇಮಕಾತಿ ಮಾಡಲಾಗುವುದು. ರಾಜ್ಯದ ಕಲ್ಯಾಣ ಕರ್ನಾಟಕ ಭಾಗದ ಶಾಲೆಗಳಿಗೆ 5000 ಶಿಕ್ಷಕರು, ಉಳಿದ ಭಾಗದಲ್ಲಿ 5000 ಸೇರಿ ಒಟ್ಟು 10 ಸಾವಿರ ಶಿಕ್ಷಕರ ನೇಮಕಾತಿ ಮಾಡಿಕೊಳ್ಳುವುದಾಗಿ ಈಗಾಗಲೇ ಬಜೆಟ್ನಲ್ಲಿ ಮುಖ್ಯಮಂತ್ರಿಗಳು ಘೋಷಿಸಿದ್ದಾರೆ. ಇದರ ಜೊತೆಗೆ ಇನ್ನೂ ಒಂಬತ್ತು ಸಾವಿರ ಹುದ್ದೆಗಳು ಸೇರಿ 19 ಸಾವಿರ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವ ಉದ್ದೇಶವಿದೆ ಎಂದು ಹೇಳಿದ್ದಾರೆ.