ನವದೆಹಲಿ : ಪ್ರತಿದಿನ ಭಾರತೀಯ ರೈಲ್ವೆಯಲ್ಲಿ 2 ಕೋಟಿ ಪ್ರಯಾಣಿಕರು ಪ್ರಯಾಣಿಸುತ್ತಿದ್ದಾರೆ. ಇದರಲ್ಲಿ ಸುಮಾರು 20% ಮಹಿಳೆಯರು ಸೇರಿದ್ದಾರೆ. ತಮ್ಮ ಆರೋಗ್ಯ, ವಯಸ್ಸು ಅಥವಾ ಅನುಕೂಲತೆಗಾಗಿ ಕೆಳಗಿನ ಬರ್ತ್ ಬಯಸುವ ಪ್ರಯಾಣಿಕ ಮಹಿಳೆಯರಿಗೆ ಮುಂಚೆ ಈ ಸೌಲಭ್ಯ ಲಭ್ಯವಿಲ್ಲದಿದ್ದುದರಿಂದ ತೊಂದರೆ ಉಂಟಾಗುತ್ತಿತ್ತು. ಇದನ್ನು ಕೇಂದ್ರ ಸರ್ಕಾರ ಈಗ ಪರಿಹರಿಸಿದೆ.
ರಾಜ್ಯಸಭೆಯಲ್ಲಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮಹಿಳೆಯರಿಗೆ ಕೆಳಗಿನ ಬರ್ತ್ ಸೌಲಭ್ಯವನ್ನು ಹೆಚ್ಚಿಸುವ ಮಹತ್ವದ ಘೋಷಣೆ ಮಾಡಿದರು. ಅವರು 45 ವರ್ಷಕ್ಕೂ ಮೇಲ್ಪಟ್ಟ ಮಹಿಳೆಯರು, ಹಿರಿಯ ನಾಗರಿಕರು ಹಾಗೂ ಗರ್ಭಿಣಿಯರಿಗೆ ಕೆಳಗಿನ ಬರ್ತ್ ನೀಡುವ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಲಾಗಿದೆ. ಇದರಿಂದ ಇಚ್ಛಿತ ಬರ್ತ್ ಸಿಗುವ ಸಾಧ್ಯತೆ ಹೆಚ್ಚುತ್ತದೆ ಎಂದು ಹೇಳಿದ್ದಾರೆ.
ಕೆಳ ಬರ್ತ್ ಮೀಸಲಾತಿ – ಹೊಸ ಕ್ರಮಗಳು :
ಸ್ಲೀಪರ್ ಕ್ಲಾಸ್ : ಪ್ರತಿ ಕಂಪಾರ್ಟ್‌ಮೆಂಟ್‌ಗೆ 7 ಕೆಳ ಬರ್ತ್ ಮೀಸಲಾತಿ
3AC : 4–5 ಕೆಳ ಬರ್ತ್
2AC : 3–4 ಕೆಳ ಬರ್ತ್
ಈ ಕ್ರಮಗಳಿಂದ ಮಹಿಳೆಯರು ಹಾಗೂ ಹಿರಿಯ ನಾಗರಿಕರಿಗೆ ಕೆಳ ಬರ್ತ್ ಪಡೆಯಲು ಆದ್ಯತೆ ದೊರೆಯಲಿದೆ.
ಅಂಗವಿಕಲರಿಗೂ ವಿಶೇಷ ಸೌಲಭ್ಯ :
ಸ್ಲೀಪರ್ ಹಾಗೂ 3AC/3E: ತಲಾ 4 ಬರ್ತ್ ಮೀಸಲಾತಿ (2 ಕೆಳ, 2 ಮಧ್ಯಮ)
2S / AC ಚೇರ್ ಕಾರ್ : 4 ವಿಶೇಷ ಸೀಟುಗಳು
ರೈಲಿನಲ್ಲಿ ಯಾವುದೇ ಖಾಲಿ ಬರ್ತ್ ಇದ್ದರೆ, ಅದನ್ನು ಹಿರಿಯ ನಾಗರಿಕರು, ಅಂಗವಿಕಲರು ಅಥವಾ ಗರ್ಭಿಣಿಯರಿಗೆ ಆದ್ಯತೆಯ ಮೇರೆಗೆ ಹಂಚಲಾಗುವುದು. “ಪ್ರಯಾಣಿಕರ ಸುರಕ್ಷತೆ, ಅನುಭವ ಮತ್ತು ಸುಗಮ ಪ್ರಯಾಣವನ್ನು ಗಮನದಲ್ಲಿಟ್ಟುಕೊಂಡು ರೈಲ್ವೆ ಮುಖ್ಯ ಬದಲಾವಣೆಗಳನ್ನು ಜಾರಿಗೊಳಿಸಿದೆ. ಇದರಿಂದ ಮಹಿಳೆಯರು ಹಾಗೂ ಹಿರಿಯ ನಾಗರಿಕರಿಗೆ ರೈಲು ಪ್ರಯಾಣ ಸುಗಮವಾಗಲಿದೆ” ಎಂದು ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

































