ಬೆಂಗಳೂರು: ಒಂದನೇ ತರಗತಿಗೆ ಪ್ರವೇಶ ಪಡೆಯುವ ಮಕ್ಕಳ ವಯೋಮಿತಿ ಸಡಿಲಗೊಳಿಸುವ ಕುರಿತ ಶಿಫಾರಸು ಒಳಗೊಂಡ ತಾತ್ಕಾಲಿಕ ವರದಿಯನ್ನು ರಾಜ್ಯ ಶಿಕ್ಷಣ ನೀತಿ ಆಯೋಗ ಸಲ್ಲಿಸಿದ್ದು, ಈ ಕುರಿತು ಶಾಲಾ ಶಿಕ್ಷಣ ಇಲಾಖೆ ನಿರ್ಧಾರ ಪ್ರಕಟಿಸಿದೆ.
ಅದರ ಪ್ರಕಾರ 5 ವರ್ಷ 5 ತಿಂಗಳಾಗಿರುವ ಮಕ್ಕಳಿಗೆ ಇನ್ನು 1 ನೇ ತರಗತಿಗೆ ದಾಖಲಾತಿ ಮಾಡಲು ಸಾಧ್ಯವಾಗಲಿದೆ. ಇದಕ್ಕೂ ಮುನ್ನ ರಾಜ್ಯ ಪಠ್ಯಕ್ರಮದಲ್ಲಿ 1ನೇ ತರಗತಿಗೆ ಮಕ್ಕಳನ್ನು ದಾಖಲಾತಿ ಮಾಡಿಕೊಳ್ಳಲು 6 ವರ್ಷ ಆಗಿರಬೇಕಾಗಿರುವುದು ಕಡ್ಡಾಯವಾಗಿತ್ತು.
ಎಲ್ಕೆಜಿ, ಯುಕೆಜಿ ಆಗಿದ್ದರೆ ಮಾತ್ರ ಒಂದನೇ ತರಗತಿಗೆ ಪ್ರವೇಶ. ಮಕ್ಕಳಿಗೆ 5 ವರ್ಷ 5 ತಿಂಗಳಾಗಿರಬೇಕು. ಪೋಷಕರ ಒತ್ತಾಯದ ಮೇರೆಗೆ ಇದೊಂದು ವರ್ಷ ಮಾತ್ರ ಅವಕಾಶ. ಮುಂದಿನ ಶೈಕ್ಷಣಿಕ ವರ್ಷದಿಂದ ಕಡ್ಡಾಯವಾಗಿ 6 ವರ್ಷ ಆಗಿರಬೇಕು ಎಂದು ಮಧು ಬಂಗಾರಪ್ಪ ಸ್ಪಷ್ಟಪಡಿಸಿದರು.
ಶಾಲಾ ಶಿಕ್ಷಣ ಇಲಾಖೆ 2022ರ ನವೆಂಬರ್‌ನಲ್ಲಿ ಹೊರಡಿಸಿದ ಆದೇಶದ ಪ್ರಕಾರ, ಜೂನ್ 1, 2025ರ ಒಳಗೆ ಆರು ವರ್ಷಗಳನ್ನು ಪೂರ್ಣಗೊಳಿಸಿದ ಮಕ್ಕಳು 2025-26 ಶೈಕ್ಷಣಿಕ ವರ್ಷಕ್ಕೆ ಒಂದನೇ ತರಗತಿಗೆ ಪ್ರವೇಶ ಪಡೆಯಲು ಅರ್ಹರಾಗಿರುತ್ತಾರೆ. ಇದರಿಂದ ಸಾವಿರಾರು ಮಕ್ಕಳ ಪ್ರವೇಶಕ್ಕೆ ಅಡ್ಡಿಯಾಗಿದೆ. ಮೊದಲು ಇದ್ದಂತೆ ಪೋಷಕರ ಇಚ್ಛೆಗೆ ಅನುಗುಣವಾಗಿ ಶಾಲೆಗೆ ಸೇರಿಸಲು ವಯೋಮಿತಿ ಸಡಿಲಿಕೆಯ ಅವಕಾಶ ನೀಡಬೇಕು ಎಂದು ಹಲವು ಪೋಷಕರು ಮನವಿ ಮಾಡಿದ್ದರು.
ಅಂದ್ರೆ 5 ವರ್ಷ 5 ತಿಂಗಳು ಇರುವ ಮಕ್ಕಳಿಗೆ ಈ ವರ್ಷ 1ನೇ ತರಗತಿ ನೋಂದಣಿಗೆ ಅವಕಾಶ ಮಾಡಲಾಗುತ್ತಿದೆ. 1ನೇ ತರಗತಿಯ ಅಡ್ಮಿಷನ್ ಜೊತೆಗೆ LKG ಪ್ರವೇಶ ಪಡೆಯುವ ಮಕ್ಕಳಿಗೆ 4 ವರ್ಷ ವಯೋಮಿತಿ ನಿಗದಿಪಡಿಸಲಾಗುತ್ತಿದೆ. ಇದು ಕೇವಲ ರಾಜ್ಯಪಠ್ಯ ಕ್ರಮಕ್ಕೆ ಮಾತ್ರ ಅನ್ವಯ. ಐಸಿಎಸ್‌ಸಿ, ಸಿಬಿಎಸ್‌ಇ ಬೋರ್ಡ್ ಬಗ್ಗೆ ನಾವು ನಿರ್ಧಾರ ಮಾಡಲು ಆಗೊಲ್ಲ ಎಂದು ಸ್ಪಷ್ಟಪಡಿಸಿದರು.