ಬೆಳಗಾವಿ : ಬೆಳಗಾವಿ ರೈಲ್ವೆ ನಿಲ್ದಾಣದಿಂದ ಅರ್ಧ ಕಿಲೋ ಮೀಟರ್ ದೂರದಲ್ಲಿ ಗೂಡ್ಸ್ ರೈಲು ಹಳಿ ತಪ್ಪಿದ್ದು, ಪರಿಣಾಮ ಸುಮಾರು 4 ಗಂಟೆಗಳ ಕಾಲ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.
ರೈಲು ಬೆಳಗಾವಿ ಕಡೆಯಿಂದ ಹುಬ್ಬಳ್ಳಿ ಕಡೆಗೆ ಹೊರಟಿತ್ತು. ಈ ವೇಳೆ ಹಳಿ ತಪ್ಪಿ ಮೂರು ಬೋಗಿಗಳು ಪಕ್ಕಕ್ಕೆ ಸರಿದಿವೆ. ಅಪಘಾತ ಸಂಭವಿಸಿದ ಕೆಲವೇ ನಿಮಿಷಗಳಲ್ಲಿ ಅದೇ ಮಾರ್ಗವಾಗಿ ರಾಣಿ ಚೆನ್ನಮ್ಮ ರೈಲು ಸಂಚರಿಸುವುದರಲ್ಲಿತ್ತು. ಅಧಿಕಾರಿಗಳ ಸಮಯಪ್ರಜ್ಞೆಯಿಂದ ರಾಣಿ ಚೆನ್ನಮ್ಮ ರೈಲು ನಿಲುಗಡೆಗೊಳಿಸಲಾಯಿತು. ಇದರಿಂದಾಗಿ ಸಂಭವನೀಯ ಭಾರೀ ಅನಾಹುತ ತಪ್ಪಿದಂತಾಗಿದೆ.
ಗೂಡ್ಸ್ ರೈಲು ಎರಡು ಗಂಟೆಗಳ ಕಾಲ ವಿಳಂಬವಾಗಿ ಚಲಿಸುತ್ತಿತ್ತು. ಹೀಗಾಗಿ, ಅದಾದ ಬೆನ್ನಲ್ಲೇ ರಾಣಿ ಚೆನ್ನಮ್ಮ ರೈಲು ಆಗಮಿಸುತ್ತಿತ್ತು. ಬೆಳಗ್ಗೆ 8 ಗಂಟೆಗೆ ರಾಣಿ ಚೆನ್ನಮ್ಮ ಸಂಚರಿಸಬೇಕಿತ್ತು. ರೈಲು ಬರುತ್ತಿದ್ದಂತೆಯೇ ಎಚ್ಚೆತ್ತ ಅಧಿಕಾರಿಗಳು, ರೈಲನ್ನು ಬೆಳಗಾವಿಯಿಂದ 8 ಕಿ.ಮೀ. ದೂರದಲ್ಲಿರುವ ದೇಸೂರು ರೈಲ್ವೆ ನಿಲ್ದಾಣದಲ್ಲಿಯೇ ತಡೆದಿದ್ದಾರೆ.
ಇನ್ನು ಘಟನಾ ಸ್ಥಳಕ್ಕೆ ರೇಲ್ವೇ ಪೊಲೀಸರು ಹಾಗೂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಯಾವ ಕಾರಣಕ್ಕೆ ಹಳಿ ತಪ್ಪಿದೆ ಎಂಬ ಬಗ್ಗೆ ಅಧಿಕಾರಿಗಳು ಮಾಹಿತಿ ಕಲೆಹಾಕುತ್ತಿದ್ದಾರೆ.