ಬೆಂಗಳೂರು: ಹೌದು ಸರ್ಕಾರಿ ಆಸ್ಪತ್ರೆಗಳ ಸರ್ಕಾರಿ ಮತ್ತು ಗುತ್ತಿಗೆ ವೈದ್ಯರು ಕರ್ತವ್ಯದ ಅವಧಿಯ ನಂತರ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ಪ್ರಶ್ನೋತ್ತರ ಕಲಾಪದ ವೇಳೆ ಕಾಂಗ್ರೆಸ್ ಸದಸ್ಯ ಕೆ.ಎಂ. ಶಿವಲಿಂಗೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸರ್ಕಾರಿ ವೈದ್ಯರು ಕರ್ತವ್ಯದ ವೇಳೆಯ ನಂತರ ಯಾವುದಾದರೂ ಒಂದು ಖಾಸಗಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲು ಅವಕಾಶ ನೀಡಲಾಗಿತ್ತು. ಇದರಿಂದ ಕೆಲವು ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಸಕಾಲಕ್ಕೆ ವೈದ್ಯರು ಸಿಗದೆ ತೊಂದರೆಯಾಗುತ್ತಿರುವುದು ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ಆಸ್ಪತ್ರೆಗಳಿಗೆ ಬರುವ ರೋಗಿಗಳಿಗೆ ಮತ್ತು ಇಲಾಖೆಯ ದೃಷ್ಟಿಯಿಂದ ಸರ್ಕಾರಿ ಆಸ್ಪತ್ರೆಗಳ ವೈದ್ಯರು ತಮ್ಮ ಕರ್ತವ್ಯದ ಅವಧಿಯ ನಂತರ ಖಾಸಗಿ ಆಸ್ಪತ್ರೆಗಳಲ್ಲಿ ಒಳ ರೋಗಿಗಳಿಗೆ ಚಿಕಿತ್ಸೆ ನೀಡುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ ಎಂದು ಹೇಳಿದ್ದಾರೆ.
ವೈದ್ಯರು ಕೇವಲ ಹೊರರೋಗಿಗಳಿಗೆ ಮಾತ್ರ ಚಿಕಿತ್ಸೆ ನೀಡಬಹುದಾಗಿದೆ. ಇದು ಸರ್ಕಾರಿ ಆಸ್ಪತ್ರೆಗಳ ಗುತ್ತಿಗೆ ವೈದ್ಯರಿಗೂ ಅನ್ವಯವಾಗುತ್ತದೆ. ಇದಕ್ಕೆ ಸರ್ಕಾರಿ ವೈದ್ಯರಿಂದ ವಿರೋಧ ವ್ಯಕ್ತವಾಗಬಹುದು. ಆದರೆ, ಸರ್ಕಾರಿ ಆಸ್ಪತ್ರೆ ರೋಗಿಗಳ ಹಿತದೃಷ್ಟಿಯಿಂದ ಈ ಕ್ರಮ ಅನಿವಾರ್ಯವೆಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

































