ಬೆಂಗಳೂರು: ಗೋರಗುಂಟೆಪಾಳ್ಯದಿಂದ ವಿಕ್ಟೋರಿಯಾ ಆಸ್ಪತ್ರೆಗೆ ಅಲ್ಪ ದೂರದ ಆಂಬ್ಯುಲೆನ್ಸ್ ಪ್ರಯಾಣಕ್ಕೆ ರೋಗಿಯೊಬ್ಬರಿಗೆ 8,500 ರೂ. ಶುಲ್ಕ ವಿಧಿಸಲಾಗಿದೆ ಎಂಬ ವರದಿಗಳು ಬೆಳಕಿಗೆ ಬಂದ ನಂತರ, ಖಾಸಗಿ ಆಂಬ್ಯುಲೆನ್ಸ್ ನಿರ್ವಾಹಕರಿಗೆ ಕಡಿವಾಣ ಹಾಕುವ ಸಲುವಾಗಿ ನಿಯಮಗಳನ್ನು ಬಿಗಿಗೊಳಿಸಲು ರಾಜ್ಯ ಆರೋಗ್ಯ ಇಲಾಖೆ ಮುಂದಾಗಿದೆ.
ಓಲಾ, ಊಬರ್ ಆ್ಯಪ್ ಬಳಸಿ ಟ್ಯಾಕ್ಸಿ ಹಾಗೂ ಆಟೋ ಬುಕ್ ಮಾಡುವಂತೆ ಆ್ಯಂಬುಲೆನ್ಸ್‌ಗಳನ್ನು ಬುಕ್ ಮಾಡುವ ಅವಕಾಶವನ್ನು ರಾಜ್ಯ ಸರ್ಕಾರ ನೀಡಲು ಮುಂದಾಗಿದೆ. ಈಗಾಗಲೇ ಗುರುಗ್ರಾಮದಲ್ಲಿ ಖಾಸಗಿ ಕಂಪನಿ ಈ ಸೇವೆಯನ್ನು ಆರಂಭಿಸಿದ್ದು, ಅದೇ ಮಾದರಿಯಲ್ಲಿ ರಾಜ್ಯ ಸರ್ಕಾರ ಕೂಡ ಆ್ಯಂಬುಲೆನ್ಸ್ ಸೇವೆ ಕಲ್ಪಿಸಲು ಯೋಜನೆ ರೂಪಿಸುತ್ತಿದೆ ಎಂದು ತಿಳಿದುಬಂದಿದೆ.
ಅತಿಯಾದ ಶುಲ್ಕಗಳ ಬಗ್ಗೆ ಬರುತ್ತಿರುವ ದೂರುಗಳನ್ನು ಗಂಭೀರವಾಗಿ ಪರಿಗಣಿಸಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಗುರುವಾರ ಖಾಸಗಿ ಆಂಬ್ಯುಲೆನ್ಸ್ ಸೇವೆಗಳನ್ನು ಕರ್ನಾಟಕ ಖಾಸಗಿ ವೈದ್ಯಕೀಯ ಸ್ಥಾಪನೆ (ಕೆಪಿಎಂಇ) ಕಾಯ್ದೆಯ ವ್ಯಾಪ್ತಿಗೆ ತರುವ ಕುರಿತು ಯೋಜನೆಯನ್ನು ಪ್ರಕಟಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಆರೋಗ್ಯ ಸಚಿವರು, ಖಾಸಗಿ ವಲಯವು ಗುಣಮಟ್ಟದ ಆರೋಗ್ಯ ಸೇವೆಯನ್ನು ಒದಗಿಸುವಲ್ಲಿ ಗಣನೀಯ ಕೊಡುಗೆ ನೀಡಿದ್ದರೂ ಒದಗಿಸುತ್ತಿರುವ ಸೇವೆಗಳು ಮತ್ತು ಗುಣಮಟ್ಟದ ಬಗ್ಗೆ ಹಲವು ದೂರುಗಳು ಬರುತ್ತಿವೆ. ವ್ಯವಸ್ಥೆಗಳು ಸರಿಯಾದ ಹಾದಿಯಲ್ಲಿ ನಡೆದರೆ ನಿರ್ಬಂಧಗಳ ಅಗತ್ಯವಿರುವುದಿಲ್ಲ. ಆದರೆ ನ್ಯೂನ್ಯತೆಗಳು ಮಿತಿ ಮೀರಿದಾಗ, ಸರ್ಕಾರ ಸಾರ್ವಜನಿಕ ಹಿತಾಸಕ್ತಿಗಾಗಿ ಕಾರ್ಯನಿರ್ವಹಿಸುವುದು ಅಗತ್ಯವಾಗುತ್ತದೆ ಎಂದಿದ್ದಾರೆ.
ಆರೋಗ್ಯ ಕ್ಷೇತ್ರವನ್ನು ಕೇವಲ ವ್ಯಾಪಾರ ಅವಕಾಶವೆಂದು ಪರಿಗಣಿಸುವ ಬದಲು ಸೇವಾ-ಆಧಾರಿತ ವಿಧಾನದಿಂದ ನಡೆಸಬೇಕು. ಈ ನಿಟ್ಟಿನಲ್ಲಿ ಬೆಲೆ ನಿಗದಿ ಮತ್ತು ಸೇವಾ ಮಾನದಂಡಗಳಿಗೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಇಲಾಖೆ ಶೀಘ್ರದಲ್ಲೇ ರೂಪಿಸಲಿದೆ.
ಆ್ಯಂಬುಲೆನ್ಸ್‌ಗಳು ಯಾವ ರೀತಿ ಇರಬೇಕು, ಅದರಲ್ಲಿ ಯಾವ ಅಗತ್ಯ ವ್ಯವಸ್ಥೆಗಳು ಇರಬೇಕು ಎಂಬ ಬಗ್ಗೆ ಹಾಗೂ ಅವುಗಳಿಗೆ ದರ ನಿಗದಿ ಪಡಿಸುವ ಬಗ್ಗೆ ಕಾನೂನು ರಚಿಸಲಾಗುತ್ತಿದೆ. ಇನ್ನು ಮುಂದೆ ಆ್ಯಂಬುಲೆನ್ಸ್ ಸೇವೆ ಒದಗಿಸುವವರು ಮತ್ತು ಮೊಬೈಲ್ ಹೆಲ್ತ್ ಯೂನಿಟ್‌ಗಳು ಖಾಸಗಿ ಆಸ್ಪತ್ರೆಗಳ ರೀತಿಯಲ್ಲಿ ಕೆಪಿಎಂಇ ಅಡಿಯಲ್ಲಿ ನೋಂದಣಿ ಮಾಡಿಕೊಳ್ಳಬೇಕು ಎಂದು ಹೇಳಿದರು.
ಕೆಪಿಎಇ ಅಡಿಯಲ್ಲಿ ನೋಂದಣಿಯಾಗುವ ಆ್ಯಂಬುಲೆನ್ಸ್‌ಗಳಿಗೆ ಅವುಗಳು ಒದಗಿಸುವ ಸೇವೆ ಆಧಾರದಲ್ಲಿದರ ನಿಗದಿಪಡಿಸಲಾಗುವುದು. ಆ್ಯಂ ಬುಲೆನ್ಸ್ ಸೇವೆಯ ಅಗತ್ಯವಿರುವವರು ಆ್ಯಪ್ ಮೂಲಕ ಬುಕಿಂಗ್ ಮಾಡುವ ಸೌಲಭ್ಯ ಒದಗಿಸಲಾಗುವುದು ಎಂದು ತಿಳಿಸಿದರು.