ಬೆಂಗಳೂರು : ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಹಾವಳಿಗಳನ್ನು ತಡೆ ಗಟ್ಟಲು ಉದ್ದೇಶಿಸಿ ರಾಜ್ಯ ಸರಕಾರ ಕಳುಹಿಸಿ ಕೊಟ್ಟಿದ್ದ ಮಹತ್ವದ ಸುಗ್ರೀವಾಜ್ಞೆಗೆ ರಾಜ್ಯಪಾಲ ಥಾವರ್ ಚಂ ಗೆಹ್ಲೋಟ್ ಅವರು ಅಂಕಿತ ಹಾಕಿದ್ದಾರೆ. ಈ ಹಿಂದೆ ರಾಜ್ಯ ಸರಕಾರ ಕಳುಹಿಸಿಕೊಟ್ಟಿದ್ದ ಸುಗ್ರೀವಾಜ್ಞೆಗೆ ರಾಜ್ಯಪಾಲರು ಅಂಕಿತ ಹಾಕದೆ, ಕೆಲವು ಸ್ಪಷ್ಟನೆ ಹಾಗೂ ಸಲಹೆಗಳೊಂದಿಗೆ ಕಡತವನ್ನು ವಾಪಸ್ ಕಳಿಸಿದ್ದರು. ಹೀಗಾಗಿ ರಾಜ್ಯ ಸರಕಾರ ಮತ್ತೊಮ್ಮೆ ಸುಗ್ರೀವಾಜ್ಞೆಯನ್ನು ರಾಜ್ಯಪಾಲರ ಅನುಮೋದನೆಗೆ ಕಳುಹಿಸಿಕೊಟ್ಟಿತ್ತು. ಅಂತಿಮವಾಗಿ ಹಲವು ಸಲಹೆಗಳನ್ನು ನೀಡಿ ರಾಜ್ಯಪಾಲರು ಸುಗ್ರೀವಾಜ್ಞೆಗೆ ಅಂಕಿತ ಹಾಕಿದ್ದಾರೆ. ಅಲ್ಲದೆ, ಸಲಹೆಗಳ ಬಗ್ಗೆ ಅಧಿವೇಶನದಲ್ಲಿ ಚರ್ಚಿಸುವಂತೆ ರಾಜ್ಯಪಾಲರು ಸೂಚಿಸಿದ್ದಾರೆ.
